Karnataka Sangha Shivamogga ಅರಣ್ಯಕರೀಣವನ್ನು ವೈಜ್ಞಾನಿಕವಾಗಿ ಮಾಡದೇ ಇರುವುದರಿಂದ ಅನೇಕ ಅನಾಹುತಗಳು ಸಂಭವಿಸುತ್ತಿವೆ ಎಂದು ವನ್ಯಜೀವಿ ತಜ್ಞ ಡಾ.ಸಂಜಯಗುಬ್ಬಿ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕರ್ನಾಟಕ ಸಂಘದ ಆವರಣದಲ್ಲಿ ರೋಟರಿ ಕ್ಲಬ್ ಜ್ಯೂಬಿಲಿ ಹಾಗೂ ಕರ್ನಾಟಕ ಸಂಘದ ಸಹಯೋಗದಲ್ಲಿ ನಡೆದ ಮಾತು-ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರಣ್ಯ ಬೆಳೆಸುವುದು ಎಂಬ ವಿಚಾರವನ್ನು ಎಲ್ಲರೂ ಸರಳವಾಗಿ ತೆಗೆದುಕೊಂಡಿದ್ದಾರೆ. ಆದರೆ, ಅದಕ್ಕೆ ಬೇಕಾದ ಅರಿವು ಎಲ್ಲರಿಗೂ ಇರುವುದಿಲ್ಲ ಎಂದು ಹೇಳಿದರು.
ಯಾವ ಪ್ರದೇಶದಲ್ಲಿ ಯಾವ ಗಿಡಗಳನ್ನು ನೆಡಬೇಕು ಎಂಬ ಆಲೋಚನೆ ಮಾಡುವುದೇ ಇಲ್ಲ. ಜೂನ್ ಮತ್ತು ಜುಲೈ ತಿಂಗಳಲ್ಲಿ ಪರಿಸರ ದಿನಾಚರಣೆಯ ಹೆಸರಿನಲ್ಲಿ ಎಲ್ಲೆಂದರಲ್ಲಿ ಗಿಡಗಳನ್ನು ನೆಡುವುದು ಸೂಕ್ತವಲ್ಲ. ಬೀಜದುಂಡೆಗಳ ಕಾರ್ಯಕ್ರಮವೂ ಸೂಕ್ತವಲ್ಲ ಎಂದು ಹೇಳಿದರು.
ಅರಣ್ಯ ಬೆಳೆಯುವುದು ಅಲ್ಲಿರುವ ಕಾಡು ಪ್ರಾಣಿಗಳಿಂದ ಮಾತ್ರ ಸಾಧ್ಯ. ದೊಡ್ಡ ಪ್ರಮಾಣದಲ್ಲಿ ಅರಣ್ಯ ಬೆಳೆಯಬೇಕೆಂದರೆ ಅಲ್ಲಿನ ಪ್ರಾಣಿ ಪಕ್ಷಿಗಳ ಸಹಾಯದಿಂದ ಮಾತ್ರ. ಅವುಗಳ ಆಹಾರ ಪದ್ಧತಿ, ಇನ್ನಿತರ ಚಟುವಟಿಕೆಯಿಂದಲೇ ಅರಣ್ಯ ವಿಸ್ತರಣೆಗೊಳ್ಳುತ್ತದೆ. ಆದರೆ, ನಾವು ಅರಣ್ಯ ಬೆಳೆಸುತ್ತಿದ್ದೇವೆ ಎಂದು ಭ್ರಮೆಯನ್ನು ಹೊಂದಿದ್ದೇವೆ. ಅಗಾಧವಾದ ಅರಣ್ಯವನ್ನು ಬೆಳೆಸುವುದು ನಮ್ಮಿಂದ ಸಾಧ್ಯವಿಲ್ಲದ ಕೆಲಸ ಅದನ್ನು ಉಳಿಸಿಕೊಂಡು ಹೋದರೆ ಸಾಕು ಎಂದು ತಿಳಿಸಿದರು.
ಎಷ್ಟೋ ಪ್ರಾಣಿಗಳು ಅಳಿವಿಂಚಿನಲ್ಲಿ ಇವೆ. ನಮ್ಮೆ ಬೇಕುಗಳು ಹೆಚ್ಚುತ್ತಲೇ ಇರುವುದರಿಂದ ಅರಣ್ಯವನ್ನು ನಾಶ ಮಾಡಿಕೊಂಡು ಬರುತ್ತಿದ್ದೇವೆ. ಇದು ಮುಂದಿನ ಪೀಳಿಗೆಯ ಮೇಲೆ ಬಹು ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಿದ ಅವರು, ನಮ್ಮ ಅರಣ್ಯ ಬಹುಮುಖ್ಯವಾದದು ಎಂಬ ಚಿಂತನೆಯೇ ನಮ್ಮಲ್ಲಿ ಇಲ್ಲ ಎಂದರು.
ಅರಣ್ಯ ಬೆಳೆಸುವುದರಿಮದ ರಾಷ್ಟ್ರೀಯ ಆದಾಯಕ್ಕೆ ದೊಡ್ಡ ಕೊಡುಗೆ ಇದೆ ಎಂಬುದನ್ನು ಅಂಕಿ ಅಂಶಗಳ ಸಮೇತ ವಿವರಣೆ ನೀಡಿದ ಅವರು, 30 ಸಾವಿರ ಕೋಟಿ ರೂ.ಗಳ ಅರಣ್ಯದ ಉತ್ಪಾದನೆಯಿಂದಲೇ ನಮಗೆ ಅರ್ಥಿಕ ನೆರವು ಸಿಗುತ್ತದೆ. ಆದರೆ, ಅದನ್ನು ನಾವು ಗಮನಿಸುವುದಿಲ್ಲ. ಅಂತಹ ಅಂಕಿ ಅಂಶಗಳ ಕುರಿತು ಸಾರ್ವಜನಿಕರಿಗೆ ಮಾಹಿತಿಯೇ ಇರುವುದಿಲ್ಲ ಎಂದು ಹೇಳಿದರು.
ಹೆದ್ದಾರಿಗಳು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಿಂದ ಅರಣ್ಯಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಎಂಬ ಅಂಶ ಎಲ್ಲರಿಗೂ ಗೊತ್ತಿದೆ. ಆದರೆ, ಅದರ ಬಗ್ಗೆ ಕುರುಡಾಗಿ ವರ್ತನೆ ಮಾಡುತ್ತೇವೆ. ಹೆದ್ದಾರಿಯಿಂದ ವನ್ಯಜೀವಿಗಳ ಪ್ರಾಣಹರಣ ದಿನನಿತ್ಯ ನಡೆಯುತ್ತಿದೆ. ಇದನ್ನು ಸರಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಸುಂದರರಾಜ್, ಮಾತನಾಡಿದರೆ, ಅರಣ್ಯ ಸಂರಕ್ಷಣೆಯಾಗುವುದಿಲ್ಲ. ಅದನ್ನು ಆಚರಣೆ ಮಾಡಬೇಕಾಗುತ್ತದೆ. ಪ್ರಕೃತಿ ಮುನಿದರೆ ಏನೆಲ್ಲಾ ಅನಾಹುತ ಸಂಭವಿಸಬಹುದು ಎಂಬ ಸಂಗತಿ ನಮಗೆ ಗೊತ್ತೇ ಇದೆ. ಆದರೂ, ಪ್ರಕೃತಿಯ ವಿರೂಪಕ್ಕೆ ನಾವೆಲ್ಲರೂ ಪರೋಕ್ಷವಾಗಿ ಕಾರಣಕರ್ತರಾಗುತ್ತಿದ್ದೇವೆ ಎಂದು ಹೇಳಿದರು.
Karnataka Sangha Shivamogga ಕಳೆದ ನಲವತ್ತು ವರುಷಗಳ ಹಿಂದಿನ ಮಲೆನಾಡು ಹಾಗೂ ಈಗಿನ ಪರಿಸ್ಥಿತಿ ಬಹು ಭಿನ್ನವಾಗಿದೆ. ನಮಗೆ ಏನು ಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅದರಿಂದ ನಾಗರೀಕತೆಯ ವಿಸ್ತಾರದಲ್ಲಿ ಬಹುಮುಖ್ಯವಾದ ಪರಿಸರದ ಅವಶ್ಯಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವೆಲ್ಲರು ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿಯ ಅಧ್ಯಕ್ಷ ರೋ.ರೇಣುಕರಾಧ್ಯ ಸ್ವಾಗತ ಮಾಡಿ ವಿಷಯದ ಪ್ರಾಸ್ತವಿಕವನ್ನು ಹೇಳಿದರು. ರೋಟರಿ ಸಹಾಯಕ ಗರ್ವನರ್ ರೋ.ರಾಜೇಂದ್ರ ಪ್ರಸಾದ್, ಕರ್ನಾಟಕ ಸಂಘದ ಕಾರ್ಯದರ್ಶಿ ಪ್ರೋ.ಆಶಾಲತಾ ಉಪಸ್ಥಿತರಿದ್ದರು.