Uttaradi Math ಯಾವಾಗ ಭಗವಂತ ಜನ್ಮ ಕೊಡುತ್ತಾನೆಯೋ ಅಂದೇ ಮರಣದ ದಿನವೂ ನಿಶ್ಚಯವಾಗಿರುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಬದುಕು ಮನುಷ್ಯನ ವಿಕಾರ, ಮರಣ ಸಹಜವಾದುದು ಎಂಬುದಾಗಿ ಕವಿ ಕಾಳಿದಾಸ ಹೇಳಿದ್ದಾನೆ. ಅಂತೆಯೇ ಎಂತಹ ಜ್ಞಾನಿಯಾದರೂ ಕೂಡ ಮರಣ ನಿಶ್ಚಿತ. ಅದು ಇಂದೇ ಆಗಬಹುದು. ಎಂದಾದರೂ ಆಗಬಹುದು. ಅದಕ್ಕೆ ಒಂದು ಕಾರಣ ನಿಮಿತ್ತ ಆಗಲಿದೆ. ಯಾವ ಕ್ರಮದಂತೆ ಮೃತ್ಯು ಆಗಬೇಕೆಂಬ ದೇವರ ಸಂಕಲ್ಪ ಇದೆಯೋ ಅದನ್ನು ತಪ್ಪಿಸಲು ಯಾರಿಂದಲೂ ಆಗುವುದಿಲ್ಲ ಎಂದರು.
ಯಾವ ಪಂಚ ಮಹಾಭೂತಗಳಿಂದ ಈ ದೇಹ ಸೃಷ್ಟಿಯಾಗಿದೆಯೋ ಅದೇ ಪಂಚ ಮಹಾಭೂತಗಳಲ್ಲಿ ಸೇರಿ ಹೋಗುತ್ತದೆ. ಒಂದರ್ಥದಲ್ಲಿ ಹಳೆಯ ಬಟ್ಟೆ ಕಳಚಿ ಹೊಸ ಬಟ್ಟೆ ಧರಿಸಿದಂತೆ. ಹುಲ್ಲಿನ ಮೇಲಿನ ಹುಳ ಮುಂದಿನ ಹುಲ್ಲಿನ ಮೇಲೆ ಕಾಲೂರಿಯೇ ಹಿಂದಿನ ಕಾಲು ಹೇಗೆ ಸರಿಸುತ್ತದೆಯೋ ಹಾಗೆ ಮುಂದಿನ ದೇಹದಲ್ಲಿ ಅಭಿಮಾನವನ್ನು ಪಡೆದುಕೊಂಡೇ ಜೀವಿ ಹಿಂದಿನ ದೇಹ ಬಿಡುತ್ತಾನೆ ಎಂದರು.
ಮರಣ ಇಲ್ಲದವ ಎಂದರೆ ದೇವರು ಮಾತ್ರ. ಆತ ಅಜರಾಮರ, ಅನಾದಿ ನಿತ್ಯ, ಧೃವ, ಶಾಶ್ವತ, ಸ್ಥಿರ. ಆತ ಜಗತ್ತಿನೊಳಗೆಲ್ಲಾ ತುಂಬಿಕೊ0ಡಿದ್ದಾನೆ. ಒಂದು ವೇಳೆ ಜಗತ್ತು ನಾಶವಾದರೂ ಭಗವಂತನಿಗೆ ನಾಶವಿಲ್ಲ ಎಂದು ತಿಳಿಸಿದ ಶ್ರೀಗಳು, ದೇವಕಿಯ ಎಂಟನೇ ಗರ್ಭದಿಂದ ತನಗೆ ಮೃತ್ಯುವಿದೆ ಎಂದು ತಿಳಿದು ಆಕೆಯನ್ನು ಕೊಲ್ಲಲು ಕಂಸ ಮುಂದಾದಾಗ ವಸುದೇವ ಆತನನ್ನು ಸಂತೈಸಿದ್ದನ್ನು ಅದ್ಭುತವಾಗಿ ವಿವರಿಸಿದರು.
ಪೂಜಾ ಕಾಲದಲ್ಲಿ ಪಂಡಿತರಾದ ವೇದವ್ಯಾಸಾಚಾರ್ಯ ಹೈದರಾಬಾದ್, ಸಭಾ ಕಾರ್ಯಕ್ರಮದಲ್ಲಿ ಅಚ್ಯುತಾಚಾರ್ಯ ಗಲಗಲಿ ಪ್ರವಚನ ನೀಡಿದರು.
Uttaradi Math ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.