Good Luck Araike Kendra ವೃದ್ಧರು, ಅಸಹಾಯಕರು, ಬುದ್ದಿಮಾಂದ್ಯರು ಹಾಗೂ ಪಾರ್ಶ್ವವಾಯು ಪೀಡಿತರು ಸೇರಿದಂತೆ ಅಗತ್ಯ ಇರುವವರಿಗೆ ಮಾಡುವ ಸೇವಾ ಕಾರ್ಯವು ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.
ಶಿವಮೊಗ್ಗ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿರುವ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ “ಅನ್ನಪೂಣೇಶ್ವರಿ ದಿನ” ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ದಿನಸಿ ಸಾಮಾಗ್ರಿ ಅಗತ್ಯ ವಸ್ತುಗಳು ಹಾಗೂ ಆರ್ಥಿಕ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲ ಹಿರಿಯನ್ನು ಗೌರವಿಸುವುದು ದೇವರನ್ನು ಪೂಜಿಸಿದಂತೆ. ನಾವು ಮಾಡುವ ಸೇವೆಯು ನಮ್ಮನ್ನು ಸದಾ ಕಾಪಾಡುತ್ತದೆ ರೋಟರಿ ಮುಖಾಂತರ ವರ್ಷದಲ್ಲಿ ಮನುಕುಲ ಸೇವೆಯ ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ವರ್ಷಪೂರ್ತಿ ಸೇವಾ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಗುಡ್‌ಲಕ್ ಆರೈಕೆ ಕೇಂದ್ರ ಯಾವುದೇ ಸರ್ಕಾರದ ಅನುದಾನವಿಲ್ಲದೇ ನಡೆಯುತ್ತಿರುವ ಸಂಸ್ಥೆ. ಇಂತಹ ಮಾನವೀಯ ಸಂಸ್ಥೆಗಳಿಗೆ ಸಂಘ ಸಂಸ್ಥೆಗಳ ನೆರವು ಅಗತ್ಯ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಒದಗಿಸಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗುಡ್‌ಲಕ್ ಆರೈಕೆ ಕೇಂದ್ರ ಅಧ್ಯಕ್ಷ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಇಲ್ಲಿರುವ ಆಶ್ರಮವಾಸಿಗಳಿಗೆ ಜಾಗದ ಕೊರತೆ ಆಗುತ್ತಿದೆ. ಆದ್ದರಿಂದ ಹೊಸ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಟ್ಟಡಕ್ಕೆ ದೇಣಿಗೆ ನೀಡಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
Good Luck Araike Kendra ಸೇವಾ ಕಾರ್ಯಕ್ರಮದಲ್ಲಿ ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಶಿವಮೊಗ್ಗ ಕಾರ್ಯದರ್ಶಿ ಕಿಶೋರ್‌ಕುಮಾರ್, ಪಂಚಾಕ್ಷರಿ ಹಿರೇಮಠ, ಡಾ. ಧನಂಜಯ, ಶಾರದಾ ಶೇಷಗಿರಿಗೌಡ, ದಿವ್ಯಾ ಪ್ರವೀಣ್, ನಾಗರಾಜ.ಎಂ.ಪಿ., ಗಣೇಶ್, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಉಪಸ್ಥಿತರಿದ್ದರು.