ಮೊನ್ನೆ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿರುವಾಗ ಗೆಳತಿ ಒಬ್ಬಳು ಫೋನ್ ಮಾಡಿದಳು. ಅಪರೂಪಕ್ಕೆ ಫೋನ್ ಮಾಡಿದರೆ ಮಾತಿಗೆ ಬರವೇ? .. ತಿಂಗಳುಗಟ್ಟಲೆ ನಡೆದ ವಿಷಯಗಳನ್ನೆಲ್ಲ ಒಂದೇ ಉಸಿರಿನಲ್ಲಿ ಒದರಿದಳು. ಹಾಗೆಯೇ ಮಾತುಗಳು ಕೆಲಸ, ಭವಿಷ್ಯ ಪ್ಲಾನ್ ಗಳ ಬಗ್ಗೆ ಹೊರಳಿತು. ತಾನು ಇಷ್ಟ ಪಟ್ಟ ಹುಡುಗನೊಂದಿಗೆ ಮದುವೆ ಫಿಕ್ಸ್ ಮಾಡಿರುವ ವಿಷಯವನ್ನೂ ತಿಳಿಸಿದಳು. ಅದಕ್ಕೆ ಉತ್ತರಿಸಿದ ನಾನು,
ಹೇಳಿ ಕೇಳಿ ಬೆಂಗಳೂರಿನಲ್ಲಿ ನಿನಗೂ ಒಳ್ಳೆ ಸಂಬಳದ ಕೆಲಸ ಇದೆ.. ಮದುವೆನೂ ಫಿಕ್ಸ್ ಆಯ್ತು… ಇನ್ನೇನ್ನು ಚಿಂತೆ ಇಲ್ಲ ಬಿಡು.. ಮಸ್ತ್ ಮಜಾ ಮಾಡಬಹುದು ನೀನು ಎಂದು ರೇಗಿಸಿದೆ…
ಆಗ ಅವಳು ಬೇಸರದಿಂದ ಕೈ ತುಂಬಾ ಸಂಬಳ ಇರೋ ಕೆಲಸ, ಇಷ್ಟಪಟ್ಟವರ ಜೊತೆಗೆ ಮದುವೆ, ಬಯಸಿದ್ದೆಲ್ಲವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಎಲ್ಲವೂ ಇದೆ.. ಆದರೆ ಯಾಕೋ ಜೀವನ “ಬೋರ್ ” ಎಂದಳು…
ಇತ್ತೀಚಿನ ದಿನಗಳಲ್ಲಿ ಯಾರನ್ನು ಕೇಳಿದರೂ ಹೇಳುವ ಮಾತು ಒಂದೇ ಅದೇ “ಬೋರ್ ” ಪ್ರತಿದಿನ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗುವುದು ಬೋರ್… ಉದ್ಯೋಗಕ್ಕೆ ಹೋಗುವ ಉದ್ಯೋಗಸ್ಥರಿಗೆ ದಿನವೂ ಒಂದೇ ರೀತಿಯ ಕೆಲಸ ಮಾಡುವುದು ಬೋರಾಗಿದ್ದರೆ, ಮನೆಯಲ್ಲಿ ಇದ್ದವರಿಗೆ ಪ್ರತಿ ದಿನ ಮನೆ ಕೆಲಸ ಬೋರ್…
Klive news Article ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರೀತಿಯ ಬೋರ್ ಇದ್ದೇ ಇರುತ್ತೆ… ಇದಕ್ಕೆ ಬೇಸರ, ಬೇಜಾರು ಎನ್ನುವ ನಾನಾ ಪದಗಳ ಅರ್ಥವೂ ಇದೆ…
ಹಾಗೆ ಸುಮ್ಮನೆ ಯೋಚಿಸಿದರೆ ಪ್ರತಿ ದಿನವೂ ಒಂದೇ ಕೆಲಸವನ್ನ ಸದಾ ಮಾಡುತ್ತಿರುವುದು ಈ ಬೋರ್ ಉಂಟಾಗಲು ಕಾರಣ ಎನ್ನಬಹುದೇನೋ…
ಜೀವನ ಆಸೆ ಕನಸುಗಳ ಆಗರ.. ಪ್ರತಿಯೊಬ್ಬರಿಗೂ ಒಂದಾದ ಮೇಲೆ ಇನ್ನೊಂದು ಕನಸುಗಳು ಇದ್ದೇ ಇರುತ್ತವೆ… ಬಯಸಿದ್ದೆಲವು ಸಿಕ್ಕ ನಂತರವೂ ಜನ ಜೀವನವೇ ಬೋರ್ ಆಗಿದೆ ಅನ್ನೋದನ್ನ ಬಿಡುವುದಿಲ್ಲ..
ಈ ಬೋರ್ ಗೆ ಹಲವು ಕಾರಣಗಳು ಇವೆ . ಜೀವನದಲ್ಲಿ ಎದುರಾಗುವ ಸಮಸ್ಯೆಗಳು, ಉದ್ಯೋಗ ಸ್ಥಳದಲ್ಲಿ ಉಂಟಾಗುವ ಒತ್ತಡಗಳು, ವೈವಾಹಿಕ ಜೀವನದ ತಲ್ಲಣಗಳು , ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದುಕೊಂಡಾಗ ಉಂಟಾಗುವ ಸೋಲುಗಳು, ಬದುಕನ್ನ ಬೋರ್ ಎನ್ನುವಂತೆ ಮಾಡುತ್ತವೆ…
ಆದರೆ ಈ ಬೋರ್ ಎನ್ನುವುದು ಬೆನ್ನಿಗೆ ಹತ್ತಿದ ಬೈತಾಳವೇನಲ್ಲ. ಅನೇಕ ರೀತಿಯಲ್ಲಿ ಇದನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ನಿಮ್ಮಲ್ಲಿ ಉತ್ಸಾಹ, ನಂಬಿಕೆ ತಂದುಕೊಳ್ಳಬೇಕಷ್ಟೇ..
ದಿನವೂ ಒಂದೇ ರೀತಿಯ ಕೆಲಸ ಮಾಡುವುದು ಯಾರಿಗಾದರೂ ಬೇಸರವೇ.. ಸದಾ ಮಾಡುವ ಕೆಲಸದ ಮಧ್ಯೆ ಒಂದು ಬ್ರೇಕ್ ಬೇಕೆಂದನಿಸುತ್ತದೆ.
ಈ ಬೋರನ್ನ ಹೋಗಲಾಡಿಸಲು ಸ್ನೇಹಿತರ ಜೊತೆ ಕಾಲ ಕಳೆಯಬಹುದು.. ಕೆಲವರು ಏಕಾಂತದಲ್ಲಿರಲು ಬಯಸುತ್ತಾರೆ. ಹಾಗಿದ್ದಾಗ ಪುಸ್ತಕಗಳನ್ನ ಓದುವುದು, ಹಾಡುಗಳನ್ನ ಕೇಳುವುದು ತಮಗಿಷ್ಟವಾದ ಚಿತ್ರ ಬಿಡಿಸುವುದು ಹೀಗೆ ವಿವಿಧ ಹವ್ಯಾಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೋರ್ ಕಡಿಮೆ ಮಾಡಿಕೊಳ್ಳಬಹುದು..
ಜೀವನದಲ್ಲಿ ಓದು ಬರಹ, ಕೆಲಸ, ಎಲ್ಲವೂ ಬೇಕು.. ಆದರೆ ಅದೇ ಜೀವನವಲ್ಲ..
ಇಂಗ್ಲಿಷ್ ನಲ್ಲಿ ” sometimes you just need to disconnect and enjoy your own company ” ಎಂಬ ಮಾತಿದೆ.. ಅದರರ್ಥ, ದಿನದಲ್ಲಿ ಸ್ವಲ್ಪ ಸಮಯವಾದರೂ ನಾವು ನಮ್ಮೊಂದಿಗೆ ಕಳೆಯಬೇಕು…
ಸಂಜೆಯ ಹೊತ್ತು ಯಾವುದಾದರೂ ಪಾರ್ಕಿಗೆ ಹೋಗಿ ವಾಕ್ ಮಾಡುವುದು ಇಲ್ಲವೇ, ಮನೆಯ ಹಿತ್ತಲಲ್ಲಿ ಇರುವ ಗಿಡಗಳಿಗೆ ನೀರು ಹಾಕುವುದು, ಪ್ರಕೃತಿಯೊಂದಿಗೆ ಒಂದಷ್ಟು ಸಮಯ ಕಳೆಯುವ ಮೂಲಕ ಬೋರನ್ನು ಹೋಗಲಾಡಿಸಬಹುದು..
ಗಾರ್ಡನ್ ಗಳಿಗೆ ಪಾರ್ಕ್ ಗಳಿಗೆ ಹೋದಾಗ, ಅಲ್ಲಿ ಬಂದಿರುವ ವಿವಿಧ ರೀತಿಯ ವ್ಯಕ್ತಿಗಳ ಪರಿಚಯವಾಗುತ್ತೆ.. ಹೊಸ ಸ್ನೇಹಿತರ ಪರಿಚಯವೂ ಕೂಡ ಮನಸ್ಸಿಗೆ ರಿಲಾಕ್ಸ್ ನೀಡುತ್ತೆ..
ಕೆಲವೊಮ್ಮೆ ನಮ್ಮ ಸಮಸ್ಯೆಗಳನ್ನ ನಾವೇ ಯೋಚಿಸುತ್ತಿದ್ದಾಗ ಸಮಸ್ಯೆ ದೊಡ್ಡದಾಗಿ ಕಾಣಿಸುತ್ತದೆ. ನಮ್ಮ ಪ್ರೀತಿ ಪಾತ್ರರೊಂದಿಗೆ ಸಮಸ್ಯೆ ಹಂಚಿಕೊಂಡು ಪರಿಹಾರ ದೊರೆದಾಗ ಅಬ್ಬಾ! ಈ ಸಮಸ್ಯೆಗೆ ಪರಿಹಾರ ನನ್ನಲ್ಲಿಯೇ ಇದ್ದರೂ ತಿಳಿಯಲಿಲ್ಲ ಎನಿಸುತ್ತದೆ.. ಮನುಷ್ಯನ ಗುಣವೇ ಹಾಗೇ ತನ್ನ ಸಮಸ್ಯೆಯೇ ದೊಡ್ಡದೆಂದು ತಲೆ ಮೇಲೆ ಕೈ ಹಾಕಿ ಕುಳಿತುಬಿಡುವುದು…
ಜೀವನ ಎಂದ ಮೇಲೆ ಕಷ್ಟ ಸುಖಗಳು ಹರಿದು ಬರುತ್ತಲೇ ಇರುತ್ತವೆ… ಅದಕ್ಕೆ ಪರಿಹಾರವನ್ನು ನಾವೇ ಕಂಡುಕೊಳ್ಳಬೇಕು.. ಚಿಕ್ಕಂದಿನ ಫೋಟೋ ಆಲ್ಬಮ್ ಗಳನ್ನು ನೋಡಿದರೆ ಹಳೆಯ ನೆನಪುಗಳೆಲ್ಲವೂ ಕಣ್ಣು ಮುಂದೆ ಬಂದು ನಿಂತಂತಾಗುತ್ತದೆ..
ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ನಮಗೆ ತಿಳಿಯದ ಹಾಗೆ ಮುಖದಲ್ಲಿ ಮುಗುಳ್ನಗೆಯೊಂದು ಆವರಿಸಿಕೊಳ್ಳುತ್ತದೆ. ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಕಳೆದ ಮಧುರ ನೆನಪುಗಳು, ಶಾಲಾ ಕಾಲೇಜುಗಳಲ್ಲಿನ ತುಂಟತನ ಮನಸ್ಸಿಗೆ ಒಂದು ರೀತಿಯ ಉಲ್ಲಾಸವನ್ನು ನೀಡುತ್ತವೆ..
ಮನೆಯಲ್ಲಿರುವ ಸ್ತ್ರೀಯರಾದರೆ ಕಸೂತಿ, ಚಿತ್ರಕಲೆ, ಸಂಗೀತ, ಪತ್ರಿಕೆಗಳಲ್ಲಿ ಬರುವ ಪದಬಂಧ ಬಿಡಿಸುವುದು , ಪೇಂಟಿಂಗ್ ಮಾಡುವುದ ಮೂಲಕ ಬೋರ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.
ವಯಸ್ಕರು, ವಿದ್ಯಾರ್ಥಿಗಳಿಗಂತೂ ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾಕಷ್ಟು ಅವಕಾಶಗಳಿವೆ. ಸಮಯ ಸಿಕ್ಕಾಗಲೆಲ್ಲಾ ಹೊಸ ವಿಷಯಗಳನ್ನು ಕಲಿಯಬಹುದು. ಈಗಂತೂ ಆಕ್ಟಿಂಗ್, ಮಾಡಲಿಂಗ್, ಗ್ರಾಫಿಕ್ ಡಿಸೈನಿಂಗ್, ಹೀಗೆ ಸಾವಿರಾರು ಸರ್ಟಿಫಿಕೇಟ್ ಕೋರ್ಸ್ಗಳು ಲಭ್ಯವಿವೆ.
ನಮ್ಮ ಮಾತೃಭಾಷೆಯಲ್ಲಿ ಬೇರೆಯ ಭಾಷೆಗಳನ್ನ ಕಲಿಯುವುದು ಕೂಡ ಒಳ್ಳೆಯ ಹವ್ಯಾಸ. ಅದರಿಂದ ನಮ್ಮ ಸಂಸ್ಕೃತಿಯೇ ಅಲ್ಲದ ಬೇರೆ ಭಾಷೆಯವರ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬಹುದು.. ಸ್ತ್ರೀಯರು ಹೊಸ ಹೊಸ ಅಡುಗೆಗಳನ್ನು ಕೂಡ ಕಲಿಯುವ ಮೂಲಕ ಬೇಸರವನ್ನು ಕಡಿಮೆ ಮಾಡಿಕೊಳ್ಳಬಹುದು.
ನಮ್ಮ ಮನಸ್ಸಿಗೆ ಇಷ್ಟವಾಗುವ ಹವ್ಯಾಸಗಳನ್ನು ಮರೆತಾಗ , ಪ್ರತಿ ದಿನವೂ ಒಂದೇ ಕೆಲಸವನ್ನು ಮಾಡುವಾಗ ಬೋರ್ ,ಅಥವಾ ಬೇಸರ ಆಗುವುದು ಸಾಮಾನ್ಯ… ಪ್ರತಿ ದಿನದಲ್ಲಿ ಒಂದಷ್ಟು ಸಮಯವಾದರೂ ನಮ್ಮೊಂದಿಗೆ ನಾವು ಕಳೆಯುವುದರ ಮೂಲಕ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಜೀವನದಲ್ಲಿ ಏನೇ ಸಮಸ್ಯೆಗಳು ಬಂದರೂ ಭಯಪಡದೆ ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸವಿದ್ದಲ್ಲಿ ಯಶಸ್ಸು ನಿಶ್ಚಿತ…..