DVS Arts and Science college ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎನ್ನುವುದು ಬಜೆಟ್‌ನ ಪ್ರಮುಖ ಆಶಯ ಆಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ. ಕೆ.ಎ.ವಿಷ್ಣುಮೂರ್ತಿ ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಡಿವಿಎಸ್ ಸಂಜೆ ಕಾಲೇಜು, ಐಕ್ಯೂಎಸಿ ಘಟಕ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ, ಕರ್ನಾಟಕ ರಾಜ್ಯ ಬಜೆಟ್ ವಿಶ್ಲೇಷಣೆ 2023-24” ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಬಜೆಟ್ ಎಲ್ಲ ವರ್ಗದ ಜನರಿಗೂ ವಿನಿಯೋಗ ಆಗಬೇಕು. ಹಣಕಾಸು ಖರ್ಚು ವೆಚ್ಚವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡುವ ಆಶಯದಿಂದ ಸರ್ಕಾರ ಬಜೆಟ್‌ನಲ್ಲಿ ವಿವಿಧ ಯೋಜನೆ ರೂಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಬಜೆಟ್ ನಿರ್ವಹಣೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ. ಖರ್ಚು ವೆಚ್ಚವನ್ನು ಸಮರ್ಪಕವಾಗಿ ನಿಭಾಯಿಸುವ ಜಾಣ್ಮೆಯಿದ್ದರೆ ಹಣಕಾಸಿನ ನಿರ್ವಹಣೆ ಸುಲಭವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಉತ್ತಮ ಬಜೆಟ್ ಮಂಡಿಸಿದಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತದೆ. ಇಲ್ಲದಿದ್ದರೆ ರಾಜ್ಯವು ಅತ್ಯಂತ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇನ್ನೂ ರಾಜ್ಯ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತದೆ. ಆದರೆ ಬಡವರ್ಗದ ಜನರ ಏಳಿಗೆಗೆ ಯೋಜನೆಗಳ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಎಂ.ಎಸ್.ಮಂಜುನಾಥ್ ಮಾತನಾಡಿ, ಅಧ್ಯಾಪಕರ ಸಂಘವು ಪ್ರತಿ ವರ್ಷ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ಬಜೆಟ್ ಕುರಿತು ಸಹ ಸೆಮಿನಾರ್ ಹಮ್ಮಿಕೊಂಡಿದೆ.
DVS Arts and Science college ಇಂತಹ ಸೆಮಿನಾರ್‌ಗಳಿಂದ ವಿದ್ಯಾರ್ಥಿಗಳಿಗೆ ಬಜೆಟ್ ಅರಿವು ಮೂಡುತ್ತದೆ ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಎಷ್ಟು ಅನುದಾನ ಮೀಸಲಿಡಲಾಗಿದೆ.
ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ ಏನೆಲ್ಲಾ ಘೋಷಿಸಿದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಬಜೆಟ್ ಅಂಶಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸಹ ಪ್ರಾಧ್ಯಾಪಕ ಡಾ. ಎಚ್.ಎಂ.ಶಿವಕುಮಾರ್, ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್, ಖಜಾಂಚಿ ಬಿ.ಗೋಪಿನಾಥ್, ಡಾ. ಧನಂಜಯ, ಪ್ರೊ. ಕುಮಾರಸ್ವಾಮಿ.ಎನ್., ಅರವಿಂದ ಜಿ.ವಿ. ಉಪಸ್ಥಿತರಿದ್ದರು.