Uttaradi Math ಹೊಳೆಹೊನ್ನೂರು ಮೂಲ ಬೃಂದಾವನದಲ್ಲಿ ಸನ್ನಿಹಿತರಾಗಿರುವ ನಮ್ಮ ಪರಂಪರೆಯ ಪೂರ್ವ ಯತಿಗಳಾದ ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದಂಗಳವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಗ್ರಂಥಗಳಲ್ಲಿ ಜ್ಞಾನದ ಪರಿಶುದ್ಧತೆಯನ್ನು ಕಾಣಬಹುದಾಗಿದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.
ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ಪುರಾಣಗಳಿಗೆ, ವೇದಗಳಿಗೆ ಅನೇಕರು ತಮ್ಮ ವ್ಯಾಖ್ಯಾನಗಳನ್ನು ರಚಿಸಿದ್ದಾರೆ. ಆದರೆ ಶ್ರೀ ಸತ್ಯಧರ್ಮರ ಶೈಲಿಯೇ ಅಪರೂಪ. ಒಂದೊಂದು ಶಬ್ದಕ್ಕೆ ಅನೇಕಾರ್ಥ ನೀಡುವ, ಮೂಲ ಸಿದ್ಧಾಂತಕ್ಕೆ ಅಬಾ ತವಾಗಿ, ಸಂದರ್ಭಕ್ಕೆ ಅನುಸಾರವಾಗಿ ಎದುರಾಗುವ ಆಕ್ಷೇಪಗಳಿಗೆ ಉತ್ತರ, ವಿರೋಧ ಪರಿಹಾರ ಹೀಗೆ ಅವರ ವ್ಯಾಖ್ಯಾನ ಅತ್ಯದ್ಭುತವಾಗಿದೆ. ಶೈಲಿಯೂ ಕೂಡ ಕವಿ ಮನಸ್ಸಿನವರಿಗೆ ಆಹ್ಲಾದ ನೀಡುವಂತಿದೆ ಎಂದರು.
ಶ್ರೀಮದ್ ಭಾಗವತ ಪುರಾಣಗಳ ರಾಜನಿದ್ದಂತೆ. ಅದರ ಒಂದೊಂದು ಸ್ಕಂದಗಳು ಭಾಗವತವೆಂಬ ಮರದ ಟೊಂಗೆಗಳು. ಎಲ್ಲ ಸ್ಕಂದಕ್ಕಿಂತಲೂ ದಶಮ ಸ್ಕಂದ ಅತೀ ವಿಸ್ತೃತವಾದ ಸ್ಕಂದ. ಅದರ ಅರ್ಥ ಗಾಂಭೀರ್ಯವೂ ಅಷ್ಟೇ ವಿಸ್ತಾರವಾಗಿದೆ. ಅಂತಹ ದಶಮ ಸ್ಕಂದಕ್ಕೆ ಶ್ರೀ ಸತ್ಯಧರ್ಮರು ವ್ಯಾಖ್ಯಾನ ಬರೆದಿದ್ದಾರೆ.
ಅದೂ ಶಾಸವೆಂಬ ನೌಕೆಯನ್ನೇರಿ, ವೇದವ್ಯಾಸರನ್ನೇ ನಾವಿಕನನ್ನಾಗಿಸಿಕೊಂಡರೆ ಮಾತ್ರ ಇದರ ಬೆಳಕು ಕಾಣಲು ಸಾಧ್ಯ ಎಂದು ಸತ್ಯಧರ್ಮರು ಅತ್ಯಂತ ಚಮತ್ಕಾರಿಕವಾಗಿ ಹೇಳಿದ್ದಾರೆ ಎಂದರು.
ವಿದ್ವತ್ ಸಭೆಯ ಆರಂಭದಲ್ಲಿ ದಾವಣಗೆರೆಯ ವೆಂಕಟಗಿರೀಶಾಚಾರ್ಯ ಮತ್ತು ಸಂಸ್ಥಾನ ಪೂಜಾ ಕಾಲದಲ್ಲಿ ಸಮೀರಾಚಾರ್ಯ ದೇಶಪಾಂಡೆ ಪ್ರವಚನ ಮಾಡಿದರು.
Uttaradi Math ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.