Dr. Selvamani R ಆನ್ಲೈನ್ ಮಾರುಕಟ್ಟೆಯು ಗ್ರಾಹಕರು ಹಾಗೂ ವರ್ತಕರಿಗೆ ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲ ಆಧುನಿಕ ಸಾಧನ ಆಗಿದೆ. ಸ್ಥಳೀಯ ಉದ್ಯಮಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ಆನ್‌ಲೈನ್ ಮಾರುಕಟ್ಟೆಯ ಕೌಶಲ್ಯ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ಶಿವಮೊಗ್ಗ ನಗರದ ಮಥುರಾ ಪಾರಾಡೈಸ್‌ನಲ್ಲಿ ಸ್ವೇಧ ಸಂಸ್ಥೆಯಿಂದ ಆಯೋಜಿಸಿದ್ದ ಮಹಿಳಾ ಉದ್ದಿಮೆದಾರರಿಗೆ “ಆನ್‌ಲೈನ್ ಮಾರುಕಟ್ಟೆ ಅಭಿವೃದ್ಧಿ ಕಾರ್ಯಕ್ರಮ” ಕುರಿತ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿದ್ದು, ಸ್ಥಳೀಯ ಆಹಾರ ಉತ್ಪನ್ನ ಸೇರಿದಂತೆ ವಿವಿಧ ರೀತಿ ಉದ್ಯಮ ನಡೆಸುತ್ತಿದ್ದಾರೆ. ಆದರೆ, ಆನ್‌ಲೈನ್ ಮಾರುಕಟ್ಟೆಯ ವಿಸ್ತಾರ ಹಾಗೂ ಅವಕಾಶಗಳ ಬಗ್ಗೆ ತಿಳವಳಿಕೆ ಅವಶ್ಯ. ಮಹಿಳಾ ಉದ್ದಿಮೆದಾರರಿಗೆ ವಿಶೇಷವಾಗಿ ತರಬೇತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಆಹಾರ ಉದ್ಯಮ, ಕರಕುಶಲ ವಸ್ತುಗಳ ತಯಾರಿಕೆ ಸೇರಿದಂತೆ ಸ್ಥಳೀಯವಾಗಿ ಸ್ವಂತ ಉದ್ಯಮ ನಡೆಸುತ್ತಿರುವ ಮಹಿಳೆ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆರ್ಥಿಕ ನೆರವು ಒದಗಿಸುವ ಕಾರ್ಯ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಸ್ವೇಧ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ದೇವಿ ಗೋಪಿನಾಥ್ ಮಾತನಾಡಿ, ಆಹಾರ, ಕೈಗಾರಿಕಾ, ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿರುವ ಮಹಿಳೆಯರು ಒಟ್ಟುಗೂಡಿ ಸ್ವೇಧ ಸಂಸ್ಥೆ ರೂಪಿಸಿದ್ದು, ಹೊಸದಾಗಿ ಉದ್ಯಮ ನಡೆಸಲು ಆಸಕ್ತ ಇರುವ ಮಹಿಳೆಯರಿಗೆ ತರಬೇತಿ ನೀಡುವ ಕಾರ್ಯ ನಡೆಸುತ್ತಿದೆ. ಸ್ಥಳೀಯ ಉದ್ದಿಮೆದಾರರಿಗೆ ಆನ್‌ಲೈನ್ ಮಾರುಕಟ್ಟೆಯ ವಿಶೇಷ ತಿಳವಳಿಕೆ ಮೂಡಿಸಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಂತರ, ಆಗಸ್ಟ್ 10 ರಂದು ನಡೆಯುವ ಆನ್ಲೈನ್ ಮಾರ್ಕೆಟಿಂಗ್ ನ ಮುಂದಿನ ಕಾರ್ಯಾಗಾರದ ವಿವರ ನೀಡಿದರು.
ಕೆನರಾ ಲೀಡ್ ಬ್ಯಾಂಕ್‌ನ ನೆಲ್ಸನ್ ಮಾತನಾಡಿ, ಮಹಿಳಾ ವಿಕಾಸ್ ಯೋಜನೆಯಡಿ ಕೈಗಾರಿಕೆ ಉದ್ಯಮ ನಡೆಸಲು 10 ಲಕ್ಷ ರೂ.ನಿಂದ ಐದು ಕೋಟಿ ರೂ. ವರೆಗೂ ಹಣಕಾಸಿನ ನೆರವು ನೀಡಲಾಗುತ್ತದೆ. ಉದ್ಯಮ ಸ್ಥಾಪನೆಗೆ ಅವಶ್ಯವಿರುವ ವಸ್ತುಗಳ ಖರೀದಿ ಹಾಗೂ ಅಗತ್ಯ ನಿರ್ವಹಣೆಗೆ ಉಪಯೋಗಿಸಬಹುದಾಗಿದೆ ಎಂದು ಹೇಳಿದರು.
ಯೂನಿಯನ್ ಬ್ಯಾಂಕ್ ಡಿಜಿಎಂ, ಪ್ರಾದೇಶಿಕ ಮುಖ್ಯಸ್ಥ ಎ.ರಾಜಾಮಣಿ ಮಾತನಾಡಿ, ಬ್ಯಾಂಕ್ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹಿಸಲು ನಾರಿ ಕಿ ಬಾರಿ ವಿಶೇಷ ಯೋಜನೆ ಇದೆ. ಆರ್ಥಿಕ ನೆರವು ಪಡೆದುಕೊಳ್ಳಬಹುದು. ಮಹಿಳೆ ರೈತರನ್ನು ಪ್ರೋತ್ಸಾಹಿಸಲು ಕೃಷಿ ಕೆ ಸಾಥ್ ಮಹಿಳಾ ವಿಕಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಮಹಿಳಾ ಉದ್ದಿಮೆದಾರರು ನಡೆಸುವ ಉದ್ಯಮಕ್ಕೆ ಪ್ರೋತ್ಸಾಹಿಸಲು, ಆಹಾರ ಉತ್ಪನ್ನ, ಕರಕುಶಲ ವಸ್ತುಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಉಚಿತವಾಗಿ ಮಳಿಗೆಗಳ ಅವಕಾಶವನ್ನು ಜಿಲ್ಲಾಡಳಿತ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಿಂದ ಮಹಿಳಾ ಉದ್ಯಮಿಗಳಲ್ಲದೆ ಚಿತ್ರದುರ್ಗ, ಬೆಂಗಳೂರು, ಹಾಸನ, ದಾವಣಗೆರೆ, ಹಾವೇರಿ ಮುಂತಾದ ಜಿಲ್ಲೆಗಳಿಂದ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.
Dr. Selvamani R ಸ್ವೇಧ ಸಂಸ್ಥೆ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಸುನೀತಾ ಚೇತನ್, ಉಮಾ ವೆಂಕಟೇಶ್, ಸುನೀತಾ ಮಾಧವ್, ಸಹನಾ ಚೇತನ್, ನಿರಂಜನಿ ರವೀಂದ್ರ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಡಿಐಸಿಯ ಗಣೇಶ್, ಬಾಲಚಂದ್ರ, ಸಂತೋಷ್, ಅಭಿಷೇಕ, ವಾದಿರಾಜ್, ಮತ್ತಿತರರು ಉಪಸ್ಥಿತರಿದ್ದರು.