Snehal Sudhakar Lokhande ದೇಶದ ಮಕ್ಕಳ ಅಪೌಷ್ಠಿಕತೆಯನ್ನು ನಿವಾರಿಸಲು ಪಶುಸಂಗೋಪನೆ ಮತ್ತು ಕೋಳಿ ಸಾಕಾಣಿಯು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಹಾಗೂ ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ ಇವರ ಸಹಯೋಗದೊಂದಿಗೆ ಇಂದು ನವುಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುವೈದ್ಯರಿಗೆ ಆಯೋಜಿಸಲಾಗಿದ್ದ ಆಧುನಿಕ ಕೋಳಿ ಸಾಕಾಣಿಕೆಯ ಕ್ರಮಗಳಳ ಕುರಿತಾದ ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷವಾಗಿ ಆಧುನಿಕ ಕೋಳಿ ಸಾಕಾಣಿಕೆಯ ಕ್ರಮಗಳು, ರೋಗಗಳ ನಿರ್ವಹಣೆ ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ಇಲ್ಲಿ ಚರ್ಚಿಸಿದ ನಂತರ ತಾವುಗಳು ಹಳ್ಳಿಗಳಲ್ಲಿರುವ ರೈತರಿಗೆ ಇವುಗಳ ಬಗ್ಗೆ ತಿಳುವಳಿಕೆ ನೀಡಿ ಉತ್ಪಾದನೆಯನ್ನು ಹೆಚ್ಚಿಸಿ ರೈತರಿಗೆ ಲಾಭದಾಯಕವಾಗಿಸುವಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ. ಗುರುಮೂರ್ತಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿಶ್ವವಿದ್ಯಾಲಯದಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ವಿಷಯಗಳ ಬಗ್ಗೆ ಅನೇಕ ವಿಸ್ತರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ.
ವಿಶೇಷವಾಗಿ ಪಶುಸಂಗೋಪನೆ ಮತ್ತು ಮೌಲ್ಯವರ್ಧನೆ ಕುರಿತಾದ ಕಾರ್ಯಕ್ರಮಗಳು ರೈತರಿಗೆ ತಲುಪಿದಾಗ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಬಹುದೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಪಶು ವಿಜ್ಞಾನ) ಡಾ. ಅಶೋಕ್ ಎಂ., ಇವರು ವಿಚಾರ ಸಂಕಿರಣದ ಪ್ರಾಸ್ತಾವಿಕ ನುಡಿಯಲ್ಲಿ ಕೋಳಿ ಸಾಕಾಣಿಕೆ ಮಹತ್ವ, ಆಹಾರ ಮತ್ತು ಪೋಷಕಾಂಶಗಳ ಭದ್ರತೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಶಿವಯೋಗಿ ಯಲಿ ಸ್ವಾಗತಿಸಿದರು.
ಪಾಲಿ ಕ್ಲಿನಿಕ್, ಜಿಲ್ಲಾ ಪಶು ಆಸ್ಪತ್ರೆ, ಶಿವಮೊಗ್ಗದ ಉಪನಿರ್ದೇಶಕ
ಡಾ. ಬಸವೇಶ ಹುಗಾರ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಹೆಚ್.ಜಿ. ಸಣ್ಣತಿಮ್ಮಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಚಾರ ಸಂಕಿರಣದಲ್ಲಿ ಕೆ.ವಿ.ಕೆ ಯ ಡಾ. ಅಶೋಕ್, ಶಿವಮೊಗ್ಗ, ಸುಮುಖ್ ಹ್ಯಾಚರೀಸ್‍ನ
ಡಾ. ರವೀಂದ್ರ ಹಾಗೂ ಹಿರಿಯ ಪಶುವೈದ್ಯಾಧಿಕಾರಿ ಡಾ. ದಯಾನಂದ ಇವರು ವಾಣಿಜ್ಯ ಕೋಳಿ ಸಾಕಾಣಿಕೆ, ಕೋಳಿ ಸಾಕಾಣಿಕೆಯ ನಿರ್ವಹಣಾ ಕ್ರಮಗಳು, ಕೋಳಿ ಮತ್ತು ಹಸು ಸಾಕಾಣಿಯ ಪೂರ್ವಾಪೇಕ್ಷಿತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
Snehal Sudhakar Lokhande ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಗೃಹ ವಿಜ್ಞಾನ),ಡಾ. ಜ್ಯೋತಿ ಎಂ. ರಾಠೋಡ್, ವಂದನಾರ್ಪಣೆಯನ್ನು ನೆರವೇರಿಸಿದರು.
ಈ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ 60 ಪಶು ವೈದ್ಯರು ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.