Bagar Hukum Land ಬಗರ್ ಹುಕುಂ ರೈತರ ಬಗ್ಗೆ ಶಾಸಕ ಬಿ.ವೈ. ವಿಜಯೇಂದ್ರ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಚೇತನ್ ವ್ಯಂಗ್ಯವಾಡಿದ್ದಾರೆ.
ಬುಧವಾರ ಸದನದಲ್ಲಿ ಮಾತನಾಡಿರುವ ವಿಜಯೇಂದ್ರ ಅವರು, ಬಗರ್ ಹುಕುಂ ರೈತರಿಗೆ ಅಧಿಕಾರಿಗಳು ನೋಟೀಸ್ ಕೊಡುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಯುತ್ತಿಲ್ಲ. ಮೂರುತಲೆಮಾರಿನ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದೆಲ್ಲಾ ರೈತವಿರೋಧಿ ನೀತಿಯಾಗಿದೆ ಎಂದಿದ್ದಾರೆ.
ವಿಜಯೇಂದ್ರ ಅವರು ಈಗ ಶಾಸಕರಾದ ಕೂಡಲೇ ಬಗರ್‍ಹುಕುಂ ರೈತರ ಬಗ್ಗೆ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದಿದ್ದಾರೆ.
ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪನವರು 4 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ರೈತಪರ ಹೋರಾಟಗಳ ಮೂಲಕವೇ ರಾಜಕೀಯವಾಗಿ ಬೆಳೆದ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಗರ್‍ಹುಕುಂ ರೈತರ ಸಮಸ್ಯೆ ಬಗೆಹರಿಸಲಿಲ್ಲ. ಅವರ ಅಣ್ಣ ಬಿ.ವೈ. ರಾಘವೇಂದ್ರ ಅವರು 3 ಬಾರಿ ಸಂಸದರಾಗಿದ್ದಾರೆ.
Bagar Hukum Land ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಬಗರ್‍ಹುಕುಂ ರೈತರ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ. ಈಗ ಸದನದಲ್ಲಿ ಬಗರ್ ಹುಕುಂ ರೈತರ ಬಗ್ಗೆ ಮಾತನಾಡುತ್ತಿದ್ದಾರೆ.
ತಮಗೆ ಅಧಿಕಾರ ಇದ್ದಾಗ ರೈತರ ಬಗ್ಗೆ ಕಾಳಜಿ ತೋರಿಸದ ವಿಜಯೇಂದ್ರ ಅವರಿಗೆ ಈಗ ರೈತರ ಬಗ್ಗೆ ಕಾಳಜಿ ಉಂಟಾಗಿದೆ. ಈ ರೀತಿ ರಾಜ್ಯ ಸರ್ಕಾರದ ಮೇಲೆ ಆರೋಪ ಹೊರಿಸುವುದು ಬಿಟ್ಟು, ತಮ್ಮ ಸಹೋದರ ಬಿ.ವೈ. ರಾಘವೇಂದ್ರ ಹಾಗೂ ತಂದೆ ಬಿ.ಎಸ್. ಯಡಿಯೂರಪ್ಪನವರ ಪ್ರಭಾವ ಬಳಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಿ ಎಂದು ಕೆ. ಚೇತನ್ ಸಲಹೆ ನೀಡಿದ್ದಾರೆ.