Anna Bhagya Scheme ಸರ್ಕಾರದ ಆದೇಶ ದಿನಾಂಕ:06-07-2023 ರನ್ವಯ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಿಗೆ ಪ್ರತಿ ಕೆ.ಜಿ. ಗೆ ರೂ.34 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುವುದು.
ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬದಲ್ಲಿ 3 ಅಥವಾ 3 ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬವು ಈಗಾಗಲೇ ಪ್ರತಿ ತಿಂಗಳು 35 ಕೆ.ಜಿ. ಆಹಾರ ಧಾನ್ಯವನ್ನು ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬಗಳಿಗೆ ನಗದು ವರ್ಗಾವಣೆ ಸೌಲಭ್ಯವನ್ನು ನೀಡಲಾಗುವುದಿಲ್ಲ. ಆದರೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಕುಟುಂಬದಲ್ಲಿ 4 ಸದಸ್ಯರ ಮೇಲ್ಪಟ್ಟವರಿಗೆ ಈ ಸೌಲಭ್ಯ ಅನ್ವಯಿಸುತ್ತದೆ.
ಕಳೆದ 3 ತಿಂಗಳುಗಳಲ್ಲಿ ಪಡಿತರ ಆಹಾರ ಧಾನ್ಯವನ್ನು ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತವೆ.
ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳಲ್ಲಿನ ಮುಖ್ಯಸ್ಥರು ಬ್ಯಾಂಕ್ ಖಾತೆಗಳನ್ನು ತೆರೆಯದೇ ಇರುವ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೇ ಇರುವ ಮತ್ತ ಆಧಾರ್ ಸಂಖ್ಯೆ ತಪ್ಪಾಗಿ ಲಿಂಕ್ ಆಗಿರುವ ಒಟ್ಟು 46,868 ಫಲಾನುಭವಿ ಕುಟುಂಬಗಳ ಪಟ್ಟಿಗಳು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ.
ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಯಲ್ಲಿರುವ ಪಟ್ಟಿಯನ್ನು ವೀಕ್ಷಿಸಿ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡದಿದ್ದರೆ, ಬ್ಯಾಂಕ್ ಖಾತೆಯ ಮಾಹಿತಿಯು ಇದುವರೆಗೆ ಲಭ್ಯವಿಲ್ಲದಿದ್ದಲ್ಲಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಿ, ನಿಷ್ಕ್ರಿಯ ಬ್ಯಾಂಕ್ ಖಾತೆಯನ್ನು ಪುನರ್ಜೀವನಗೊಳಿಸಿದ ನಂತರ ಅಂತಹ ಪಡಿತರ ಚೀಟಿ ಕುಟುಂಬದ ಮುಖ್ಯಸ್ಥರ ಖಾತೆಗೆ ನಗದು ವರ್ಗಾವಣೆ ಮಾಡಲಾಗುತ್ತದೆ.
ಜುಲೈ ತಿಂಗಳ 20 ನೇ ತಾರೀಖಿನೊಳಗೆ ತಮ್ಮ ಸಕ್ರಿಯ ಬ್ಯಾಂಕ್ ಖಾತೆಯ ಮಾಹಿತಿಯನ್ನು ನೀಡಿದ ಪಡಿತರ ಕುಟುಂಬಗಳಿಗೆ ಆಗಸ್ಟ್ ತಿಂಗಳಿನಲ್ಲಿ ನಗದು ವರ್ಗಾವಣೆ ಸೌಲಭ್ಯ ದೊರಕುತ್ತದೆ.
ಇ-ಕೆವೈಸಿ ಯನ್ನು ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಆಗಸ್ಟ್ ತಿಂಗಳಿನಿಂದ ಆಹಾರ ಧಾನ್ಯ ಹಾಗೂ ನಗದು ವರ್ಗಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು.
Anna Bhagya Scheme ಬಯೋಮೆಟ್ರಿಕ್ ಪರಿಶೀಲನೆ ಬದಲಿಗೆ ಮೊಬೈಲ್ ಓಟಿಪಿ ಮುಖಾಂತರ ಆಹಾರ ಧಾನ್ಯವನ್ನು ಪಡೆಯುತ್ತಿರುವ ವ್ಯವಸ್ಥೆಯನ್ನು ಮುಂದಿನ 2 ತಿಂಗಳ ಒಳಗಾಗಿ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.