Klive news Special Article ಇದು ಕಲ್ಪನೆಯ ಕಾವ್ಯವಲ್ಲ. ಅಕ್ಷರಶಃ ಕಣ್ಣೆದುರಿನ ದೃಶ್ಯಕ್ಕೆ ಬರೆದ ಭಾವಭಾಷ್ಯ. ಕಳೆದ 10 ದಿನಗಳಿಂದ ಬಾನಿಗೆ ತೂತು ಬಿದ್ದಂತೆ ಹಗಲಿರುಳು ಒಂದೇ ಸಮನೆ ಭೋರ್ಗರೆಯುತ್ತಿರುವ ವರ್ಷಧಾರೆಯ ಅನಾವರಣ. ನಿನ್ನೆ ಮಧ್ಯಾಹ್ನ 1 ಗಂಟೆಗೆ ಡ್ಯೂಟಿಗೆ ಹೋಗುವಾಗ ರಾತ್ರಿ 11 ಕ್ಕೆ ಮರಳುವಾಗ, 20 ಕಿ.ಮೀ. ದೂರದ ಸಹ್ಯಾದ್ರಿ ಕಾನನದ ನಡುವಿನ, ಕಾಳಿ ದಂಡೆಯ ಹಾದಿಯುದ್ದಕ್ಕೂ ಕಂಡ ದೃಶ್ಯಗಳ ಕವಿ ಕಂಗಳ ಚಿತ್ರಣ. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಮಳೆಗಾಲದ ಹಾದಿ..!
ಮೋಡಕವಿದ ಮಬ್ಬು ಬೆಳಕಲಿ
ನಿದ್ದೆಗಣ್ಣಲಿ ಒದ್ದೆ ಮೈಯಲಿ ರಸ್ತೆ
ಇಕ್ಕೆಲಗಳಲೂ ನಡುಗುತ ನಿಂತ
ಗಿಡಮರಗಳೊಂದಿಗೆ ಕೋರುತಿದೆ
ಸ್ವಾಗತವನು ಮಳೆಹನಿ ನಡುವಲಿ.!
ಹಾದಿಯುದ್ದಕ್ಕೂ ಅಕ್ಕ ಪಕ್ಕಗಳಲಿ
ಹಳ್ಳ ಕೊಳ್ಳ ನದಿ ಭೋರ್ಗರೆದು
ಉಕ್ಕುಕ್ಕಿ ಹರಿಯುತಿವೆ ರಭಸದಲಿ
ಧಾರಾಕಾರ ವರ್ಷಧಾರೆಗೆ ನೆನೆದು
ಮಾರುತ ಹಾಡಿದೆ ಮಂದಸ್ತರದಲಿ.!
ನಡುಗುವ ಮರಗಳ ಕೊಂಬೆಗಳಲಿ
ಮುದುರಿ ಕುಳಿತ ಹಕ್ಕಿಪಕ್ಷಿ ಸಂಕುಲ
ಮೌನತಂತಿ ಮೀಟಿವೆ ನಿಶ್ಶಬ್ದರಾಗದಲಿ
ಪೆÇಠರೆಗಳಲಡಗಿದ ಅಳಿಲು ಮೊಲ
ಬಿರುಮಳೆಗೆ ವಟಗುಟ್ಟಿವೆ ಬೆಚ್ಚುತಲಿ.!
ಮೇಘಗಳ ತಾಡನಕೆ ಹೆದರಿ ಆದಿತ್ಯ
ಉಸಾಬರಿ ಬೇಡವೆಂದು ಬೆಚ್ಚಹೊದ್ದು
ಮಲಗಿಹನು ಮುಗಿಲಿನ ಮನೆಯಲಿ
ಅವನಿಗಿಲ್ಲದ ಜವಾಬ್ಧಾರಿ ನನಗೇಕೆಂದು
ಚಂದ್ರನೂ ಕಾಣೆಯಾಗಿಹನು ಕತ್ತಲಲಿ.!
Klive news Special Article ಜಗದ ಜೀವ ಜೀವನಗಳ ಅರಿವಿಲ್ಲದೆ
ಯಾವ್ಯಾವುದರ ಪರಿವೆಯೂ ಇಲ್ಲದೆ
ನರ್ತಿಸುತಿಹನು ವರುಣ ರೌದ್ರತೆಯಲಿ
ಬಾನು ಭೂಮಿ ಏಕವಾದ ಘಳಿಗೆಗಳಿಗೆ
ಮೂಕಸಾಕ್ಷಿಯಾಗಿದೆ ರಸ್ತೆ ಮೌನದಲಿ.!
ಎ.ಎನ್.ರಮೇಶ್.ಗುಬ್ಬಿ.