Fa. Gu. Halakatti Foundation ಬೆಂಗಳೂರಿನ ಟೌನ್ ಹಾಲ್ ನಲ್ಲಿ ಫ.ಗು.ಹಳಕಟ್ಟಿ ಫೌಂಡೇಷನ್ ಹಮ್ಮಿಕೊಂಡಿದ್ದ ವಚನ ಪಿತಾಮಹ ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ
ನವರು ಉದ್ಘಾಟಿಸಿ ಪ್ರಶಸ್ತಿ ವಿತರಿಸಿದರು.
ಕಾರ್ಯಕ್ರಮದಲ್ಲಿ ವಚನ ಕ್ಷೇತ್ರದಲ್ಲಿ ಮೌಲ್ಯಯುತ ಸಾಹಿತ್ಯಿಕ ಕೆಲಸ ಮಾಡಿರುವ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶಿಕ್ಷಣ ತಜ್ಞ ಡಾ.ವಿ.ಪಿ.ನಿರಂಜನಾರಾಧ್ಯ, ಸಮಾಜ ಸೇವಕಿ ಶ್ರೀಮತಿ ಎಸ್.ಜಿ.ಸುಶೀಲಮ್ಮ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೇಲಿಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ವಹಿಸಿದ್ದರು.
Fa. Gu. Halakatti Foundation ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಫೌಂಡೇಶನ್ ವತಿಯಿಂದ ಅವರ ‘ಶಿವಾನುಭವ’ ಪತ್ರಿಕೆಗಳನ್ನು ಮರುಮುದ್ರಣ ಮಾಡಿ, ಆ ಮಹನೀಯರ ಸಾಧನೆಗಳನ್ನು ಮತ್ತೊಮ್ಮೆ ಜನರಿಗೆ ತಲುಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
‘ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿ ಎಸ್ ಜಿ ಸಿದ್ದರಾಮಯ್ಯ, ನಿರಂಜನಾರಾಧ್ಯ ಮತ್ತು ಸಮಾಜಸೇವಕಿ ಎಚ್ ಜಿ ಸುಶೀಲಮ್ಮ ಅವರಿಗೆ ತಲಾ 1 ಲಕ್ಷ ರೂ. ನಗದು ಸಹಿತ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ವಿಜಯಪುರದ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿದವರೇ ಹಳಕಟ್ಟಿಯವರು. ಈಗ ಅಲ್ಲಿ ಅವರ ಸ್ಮರಣಾರ್ಥವಾಗಿ ಪ್ರತಿಷ್ಠಾನವಿದೆ. ಅದರಿಂದ ಇಲ್ಲಿಯವರೆಗೂ ವಚನ ಸಾಹಿತ್ಯದ 10 ಸಂಪುಟಗಳು, ಆದಿಲ್‌ಶಾಹಿ ಸಾಹಿತ್ಯ, ಎಂ.ಎಂ.ಕಲ್ಬುರ್ಗಿಯವರ ಸಮಗ್ರ ಸಾಹಿತ್ಯದ 40 ಸಂಪುಟಗಳು ಹೊರಬಂದಿವೆ.
ಸದ್ಯದಲ್ಲೇ ದಾಸ ಸಾಹಿತ್ಯ ಸಂಪುಟಗಳು ಹೊರಬರಲಿವೆ. ಇವುಗಳ ಜತೆಗೆ ಸರಕಾರದ ನೆರವಿನಿಂದ ಹಳಕಟ್ಟಿಯವರು ಹೊರತರುತ್ತಿದ್ದ ಪತ್ರಿಕೆಗಳನ್ನು ಮರುಮುದ್ರಣ ಮಾಡಲಾಗುವುದು” ಎಂದರು.
ಹಳಕಟ್ಟಿಯವರು ವಚನ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಕನ್ನಡ ಜನತೆಗೆ ನೀಡಿದರು. ಇದರ ಜತೆಗೆ ಅವರು ಶಿಕ್ಷಣ, ಸಹಕಾರ, ಸಾರ್ವಜನಿಕ ಸೇವೆಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಇಂದು ರಾಜ್ಯದೆಲ್ಲೆಡೆ ಹೆಸರಾಗಿರುವ ಶ್ರೀ ಸಿದ್ಧೇಶ್ವರ ಅರ್ಬನ್ ಕೋಆಪರೇಟೀವ್ ಬ್ಯಾಂಕಿನ ಸ್ಥಾಪನೆ ಅವರ ಸಾಹಸವಾಗಿದೆ. ಜತೆಗೆ ವಿಜಯಪುರ ನಗರಕ್ಕೆ ಕುಡಿಯುವ ನೀರನ್ನು ಒದಗಿಸುವ ಭೂತನಾಳ ಕೆರೆಯ ಶಿಲ್ಪಿ ಕೂಡ ಅವರೇ ಆಗಿದ್ದಾರೆ ಎಂದು ಅವರು ಸ್ಮರಿಸಿಕೊಂಡರು.
ಹಳಕಟ್ಟಿಯವರ ಹೆಸರು ಸಾಹಿತ್ಯ ಕ್ಷೇತ್ರದಲ್ಲಿ ಅಜರಾಮರವಾಗಿ ಇರಲಿದೆ. ಅವರ ಸಾಧನೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಬಿಎಲ್‌ಡಿಇ ಸಂಸ್ಥೆ ಮಾಡುತ್ತಿದೆ. ಇದನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗಿ ಮಾಡಲಾಗುವುದು ಎಂದು ಅವರು ನುಡಿದರು.
ಶ್ರೀಮತಿ ಶೀಲಾ ಹಳಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಪವಿತ್ರ ಹಳಕಟ್ಟಿ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.