DVS PU-Independent College Shivamogga ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಅವಕಾಶಗಳಿದೆ. ಶೈಕ್ಷಣಿಕ ಹಂತದಿಂದಲೇ ವಿದ್ಯಾರ್ಥಿಗಳು ವೃತ್ತಿ ಹಾಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಬಗ್ಗ ಅಲೋಚನೆ ಮಾಡಬೇಕು ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಅವರು ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿ ಹಾಗೂ ಡಿವಿಎಸ್ ( ಸ್ವತಂತ್ರ ) ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಲೆಕ್ಕ ಪರಿಶೋಧನಾ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿರಂತರ ಪರಿಶ್ರಮ ವಹಿಸಿದರೆ ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಮುಂದಿನ ಐದು ವರ್ಷಗಳಲ್ಲಿ ವೃತ್ತಿಪರ ಲೆಕ್ಕ ಪರಿಶೋಧಕನಾಗುವ ಕುರಿತು ಈಗಿನಿಂದಲೇ ಸಿದ್ದತೆ ಆರಂಭಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಂಸ್ಥೆ ಸದಾ ಬೆನ್ನೆಲುಬಾಗಿದೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಕಿರಣ್ ವಸಂತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪೋಷಕರು ಸದಾ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇನ್ನೊಬ್ಬರ ಮಕ್ಕಳ ಜತೆ ಹೋಲಿಕೆ ಮಾಡಬೇಡಿ, ಕಠಿಣ ಸಂದರ್ಭದಲ್ಲಿ ಮಕ್ಕಳ ಜತೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಪೋಷಕರು ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಅಲೋಚನೆ ಬೆಳೆಯುತ್ತದೆ. ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಹೇಳಿದರು.
ಡಿವಿಎಸ್ ( ಸ್ವತಂತ್ರ ) ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿ, ಪಿಯು ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಇರುವ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ದಾಖಲಾತಿ ನಂತರ ಕೂಡ ವಿದ್ಯಾರ್ಥಿಗಳ ಆಯ್ಕೆಯ ವಿಭಾಗದಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಪರಿಣಿತರಿಂದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಪೋಷಕರು ಮಕ್ಕಳಿಗೆ ಧನಾತ್ಮಕ ಬೆಂಬಲ ನೀಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಡಿವಿಎಸ್ ಸಂಸ್ಥೆಯು ಸದಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
DVS PU-Independent College Shivamogga ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕ ಪರಿಶೋಧಕ ಸಚಿನ್ ಮಾತನಾಡಿದರು. ಲೆಕ್ಕ ಪರಿಶೋಧಕರಾದ ದೀಪಿಕಾ, ಜೇಸನ್ ಕ್ಯಾಸ್ಟಲಿನೋ, ನಾಗರಾಜ್ ಹೆಬ್ಬಾರ್, ಕಾಲೇಜಿನ ಉಪನ್ಯಾಸಕ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.