Malenadu Regional Development Board ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಮಲೆನಾಡು ಮತ್ತು ಬಯಲು ಸೀಮೆಯ ಜಿಲ್ಲೆಗಳಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಡುಗಡೆಗೊಳಿಸುತ್ತಿರುವ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ಇನ್ನಷ್ಟು ಅನುದಾನವನ್ನು ಬಿಡುಗಡೆಗೊಳಿಸುವಂತೆ ಮಂಡಳಿಯ ಸರ್ವ ಸದಸ್ಯರ ನಿಯೋಗದೊಂದಿಗೆ ಜುಲೈ 07ರಂದು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಿ.ಸುಧಾಕರ್ ಅವರು ಹೇಳಿದರು.
ನಗರದ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಂಡಳಿಯು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಶಕ್ತವಾಗಿದ್ದು, ಮಂಡಳಿಯ ವತಿಯಿಂದ ಕೈಗೊಳ್ಳಲಾದ ಈವರೆಗಿನ ಕಾಮಗಾರಿಗಳು ತೃಪ್ತಿಕರವಾಗಿವೆ. ಈ ಮಂಡಳಿಯನ್ನು ಇನ್ನಷ್ಟು ಕ್ರಿಯಾಶೀಲವಾಗಿ ಮಾಡುವಲ್ಲಿ ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.
ಮಂಡಳಿಯ ಪ್ರದೇಶದ ವ್ಯಾಪ್ತಿ ವಿಶಾಲವಾಗಿದ್ದು, ಅನುದಾನ ಕಡಿಮೆಯಾಗಿದೆ. ಇನ್ನಷ್ಟು ಹೆಚ್ಚಿನ ಅನುದಾನಕ್ಕೆ ಪ್ರಂiÀiತ್ನ ಮಾಡಲಾಗುವುದಲ್ಲದೇ ಬಿಡುಗಡೆಯಾದ ಮೊತ್ತವನ್ನು ನಿರೀಕ್ಷಿತ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದವರು ನುಡಿದರು.
Malenadu Regional Development Board ಸಭೆಯಲ್ಲಿ ಉಪಸ್ಥಿತರಿದ್ದ ಸಿರ್ಸಿ ಶಾಸಕ ಭೀಮಣ್ಣನಾಯ್ಕ ಅವರು ಮಾತನಾಡಿ, ಮಲೆನಾಡಿನಲ್ಲಿ ಆಗಾಗ್ಗೆ ತಲೆದೋರುವ ಪ್ರಕೃತಿ ವಿಕೋಪ ಮತ್ತು ಮಳೆಹಾನಿಗಳಿಂದಾಗಿ ಆಗುವ ಅವಘಡಗಳಿಗೆ ಪರ್ಯಾಯ ಕ್ರಮವಾಗಿ ಕೆರೆ-ಕಟ್ಟೆ-ಕಾಲುವೆಗಳಿಗೆ ಆದ್ಯತೆ ನೀಡುವಂತೆ ಹಾಗೂ ಕಾಲುಸಂಕಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಮಾತನಾಡಿ, ಮಂಡಳಿ ವ್ಯಾಪ್ತಿಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಂದ ಕಾಮಗಾರಿಗಳ ಹೊಸ ಪ್ರಸ್ತಾವನೆಗಳನ್ನು ಪಡೆದು, ಸಭೆಯಲ್ಲಿ ಅನುಮೋದನೆ ಪಡೆದು, ಅಗತ್ಯವಿರುವ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಂಡಳಿಯ ಆಡಳಿತಾಧಿಕಾರಿ ಕೆ.ಎಸ್.ಮಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಂಡಳಿಯು ಮಲೆನಾಡು ಪ್ರದೇಶದ 13 ಜಿಲ್ಲೆಗಳ ಪ್ರಾಥಮಿಕ ಅವಶ್ಯಕತೆಗಳಾಗಿರುವ ರಸ್ತೆ, ಚರಂಡಿ, ಕಾಲುವೆ, ಸಣ್ಣ ಹಾಗೂ ಸೇತುವೆಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕವಾಗಿರುವ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ಸೇವೆಗಳು, ಸಮುದಾಯ ಭವನಗಳು, ಬಸ್ ನಿಲ್ದಾಣ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಕಳೆದ ಸಾಲಿನಲ್ಲಿ 43.00ಕೋಟಿ ರೂ.ಗಳ ಅನುದಾನ ನಿಗಧಿಪಡಿಸಲಾಗಿತ್ತು. ಅದರಲ್ಲಿ ಬಂಡವಾಳ ವೆಚ್ಚ 32.64, ವಿಶೇಷ ಘಟಕ ಯೋಜನೆ 7.37ಕೋಟಿ ಮತ್ತು ಗಿರಿಜನ ಉಪಯೋಜನೆಯಡಿ 2.99ಕೋಟಿ ಬಿಡುಗಡೆಯಾಗಿತ್ತು.
ಈ ಅನುದಾನದಲ್ಲಿ ಮಂಡಳಿಯ ಎಲ್ಲಾ ಶಾಸಕ ಸದಸ್ಯರುಗಳಿಗೆ ತಲಾ 50 ಲಕ್ಷ ರೂ.ಗಳಂತೆ ಕ್ರಿಯಾಯೋಜನೆಗೆ ಕಾಮಗಾರಿಗಳನ್ನು ನೀಡಲು ಪತ್ರವ್ಯವಹಾರ ಮಾಡಲಾಗಿದೆ. ಹೊಸ ಶಾಸಕರಿಂದಲೂ ಪ್ರಸ್ತಾವನೆ ಪಡೆದು, ಸರ್ಕಾರಕ್ಕೆ ಬೇಡಿಕೆಯನ್ನು ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಶಾಂತನಗೌಡರ್, ಎ.ಎಸ್.ಚನ್ನಬಸಪ್ಪ, ಬಸವರಾಜ ಶಿವಣ್ಣನವರ್, ಹನುಮಂತನಿರಾನಿ, ರಾಜೇಗೌಡ, ಯು.ಬಿ.ಬಣಕಾರ್, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.