Adichunchanagiri Educational Institution ಬೋಧನೋಪಕರಣದಿಂದ ಮಕ್ಕಳಿಗೆ ಮಾಡುವ ಪಾಠ ಅತ್ಯಂತ ಉಪಯುಕ್ತವಾಗಿರುತ್ತದೆ ಎಂದು ಶಿಕ್ಷಣ ತಜ್ಞೆ ಹಾಗೂ ಖ್ಯಾತ ವಾಗ್ಮಿ ಅಕ್ಷತಾ ಗೋಖಲೆ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ವತಿಯಿಂದ ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಏರ್ಪಡಿಸಿದ್ದ ಪುನಶ್ಚೇತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಹಜವಾಗಿ ಬೋಧನೋಪಕರಣದ ಕಡೆ ಆಸಕ್ತಿಯನ್ನು ವಹಿಸುತ್ತಾರೆ. ಇದನ್ನು ಉಪಯೋಗಿಸಿ ಮಾಡುವಂತಹ ಪಾಠ ಮಕ್ಕಳ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಶಿಕ್ಷಕರೂ ಕೂಡ ಪ್ರತಿನಿತ್ಯ ವಿದ್ಯಾರ್ಥಿಗಳೇ, ದಿನದ ೨೪ ಗಂಟೆಯೂ ಕೂಡ ನಿಮ್ಮಲ್ಲಿ ಕಲಿಕೆಯ ತುಡಿತವಿರಬೇಕು.ನಾನು ಎಲ್ಲವನ್ನು ಕಲಿತಿದ್ದೇನೆ, ನಾನು ಓದುವ ಸಂದರ್ಭದಲ್ಲಿ ಎಲ್ಲವನ್ನೂ ಅರಿತಿದ್ದೇನೆ ಎಂದುಕೊಂಡರೆ ನಿಮ್ಮ ಜ್ಞಾನ ಮಟ್ಟ ಅಂದೇ ಕುಸಿಯಲಾರಂಭಿಸುತ್ತದೆ. 365 ದಿನವೂ ನೀವು ಕಲಿಕೆಯನ್ನು ಮುಂದುವರಿಸಿದ್ದೇ ಆದರೆ ಮಾದರಿ ಶಿಕ್ಷಕರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
Adichunchanagiri Educational Institution ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದು ಒಂದು ಕಲೆ, ಯಾವುದೋ ಒಂದು ಪರೀಕ್ಷೆಯಲ್ಲಿ ಮಗು ಶೂನ್ಯ ಅಂಕವನ್ನು ಪಡೆಯಿತು ಎಂದರೆ ಅದರ ಭವಿಷ್ಯವೇ ಮುಗಿದಂತೆ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಕರು ಮಗುವನ್ನು ಹುರಿದುಂಬಿಸುವಂತಹ ಕಾರ್ಯವನ್ನು ಮಾಡಬೇಕು. ಪ್ರತಿಯೊಂದು ಮಗುವಿನಲ್ಲಿಯೂ ಕೂಡ ಅದರದ್ದೇ ಆದ ಜ್ಞಾನ ಮಟ್ಟವಿರುತ್ತದೆ. ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ನಿಮ್ಮದಾಗಿರುತ್ತದೆ ಎಂದು ಶಿಕ್ಷಕರಿಗೆ ತಿಳಿಸಿದರು.
ಮನೆಯ ಸಮಸ್ಯೆಯನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು. ಆಟದ ಲೆಕ್ಕ ಆಟಕ್ಕೆ, ಊಟದ ಲೆಕ್ಕ ಊಟಕ್ಕೆ, ಪಾಠದ ಲೆಕ್ಕ ಪಾಠಕ್ಕೆ ಇದನ್ನು ಅರಿತು ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬ ಮನುಷ್ಯರಿಗೂ ತನ್ನದೇ ಆದ ವೈಯಕ್ತಿಕ ಸಮಸ್ಯೆಗಳಿರುತ್ತವೆ. ಶಾಲೆಗೆ ಬರುವಾಗ ಅವುಗಳನ್ನು ಮನೆಯಲ್ಲಿಯೇ ಬಿಟ್ಟು, ಬಂದರೆ ನಿಮ್ಮ ಅಂದಿನ ಪಾಠ ಯಶಸ್ವಿಯಾಗಿ ನೆರವೇರುತ್ತದೆ ಎಂದ ಅವರು, ಮಕ್ಕಳನ್ನು ತಮ್ಮದೇ ಮಕ್ಕಳು ಎಂಬಂತೆ ನೋಡಿಕೊಂಡಾಗ ಮಾತ್ರ ಆ ಮಗುವಿನ ಶ್ರೇಯಸ್ಸು ಹೆಚ್ಚಾಗಲು ಸಾಧ್ಯ ಎಂದು ಹೇಳಿದರು.
ಅಬ್ದುಲ್ ಕಲಾಂ ರಾಷ್ಟ್ರಪತಿಗಳು ಆಗಿದ್ದರೂ ಸಹ ಮಕ್ಕಳಲ್ಲಿ ಮಕ್ಕಳಾಗಿ ಅವರುಗಳಿಗೆ ಜ್ಞಾನವನ್ನು ಧಾರೆಯೆರೆಯುತ್ತಿದ್ದರು ಎಂದ ಅವರು, ಅನೇಕ ಉದಾಹರಣೆಗಳ ಮೂಲಕ ಮಕ್ಕಳಿಗೆ ವಿಷಯವನ್ನು ಮನನ ಮಾಡಿಸುತ್ತಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆಯ ಹಾಗೂ ಬಿಜಿಎಸ್ ವಸತಿ ಶಾಲೆಯ ಪ್ರಾಂಶುಪಾಲೆ ಹೇಮಾ. ಎಸ್.ಆರ್, ವ್ಯವಸ್ಥಾಪಕ ಅಮಿಷ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.