Saturday, December 6, 2025
Saturday, December 6, 2025

Klive news Special Article ಮನಸ್ಸಿನಿಂದ ಮನಸ್ಸಿಗೆ

Date:


Klive news Special Article ” ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ………….”

ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್ ನಲ್ಲಿ ಭಾವಗೀತೆಯ ಶೈಲಿಯ ಈ ಹಾಡು ಕೇಳುತ್ತಿರುವಾಗ ಕಾರಣವಿಲ್ಲದೇ ಆಗಿನ ಗ್ರಾಮೀಣ ಭಾಗದ ಒಬ್ಬ ಸಂದೇಶವಾಹಕ ಪಾತ್ರವೂ ನೆನಪಾಯಿತು. ಮೈಸೂರು ಮಲ್ಲಿಗೆಯ ಕವಿ ಕೆ ಎಸ್ ನರಸಿಂಹ ಸ್ವಾಮಿಯವರ ಬಳೆಗಾರ ಚೆನ್ನಯ್ಯ. ಆ ಭಾವಗೀತೆಯನ್ನೂ ಕೇಳುತ್ತಾ ಇಂದಿನ ಯುವಕ ಯುವತಿಯರಿಗೆ ಆತನನ್ನು ಪರಿಚಯಿಸಬೇಕೆಂದು ಆಸೆಯಾಗಿ…….

” ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು……….”

ಎಲ್ಲಿ ಹೋದೆ ನೀ ಬಳೆಗಾರ ಚೆನ್ನಯ್ಯ………….

ಮನಸ್ಸು ಭಾರವಾಗುತ್ತದೆ,
ಹೃದಯ ಭಾವುಕವಾಗುತ್ತದೆ,
ಕಣ್ಣುಗಳು ತೇವವಾಗುತ್ತದೆ……

ತಂಗಿಯರೆ – ತಮ್ಮಂದಿರೇ – ಮಕ್ಕಳೇ…………….

Klive news Special Article ಬಳೆಗಾರರೆಂಬ ಚೆನ್ನಯ್ಯ ಹೊನ್ನಯ್ಯ ಸಿದ್ದಯ್ಯ ಮಾರಯ್ಯ ರಾಮಯ್ಯ ಕೃಷ್ಣಯ್ಯರೆಂಬ ಹೆಸರಿನ ಜನರಿದ್ದರು
ಹಳ್ಳಿಗಳಲ್ಲಿ………,

ಎಡ ಭುಜಕ್ಕೊಂದಷ್ಟು,
ಬಲ ಭುಜಕ್ಕೊಂದಷ್ಟು,
ಸಾಧ್ಯವಾದರೆ ತಲೆಯ ಮೇಲೂ ಬಟ್ಟೆಯಲ್ಲಿ ಸುತ್ತಿದ ಬಣ್ಣ ಬಣ್ಣದ ಗಾಜಿನ ಬಳೆಗಳನ್ನು ಹೊತ್ತು ವಾರಗಟ್ಟಲೆ ಕಾಲ್ನಡಿಗೆಯಲ್ಲಿ ಊರೂರು ಸುತ್ತುತ್ತಾ, ಯಾರದೋ ಮನೆಯಲ್ಲಿ ಉಣ್ಣುತ್ತಾ, ಎಲ್ಲೆಂದರಲ್ಲಿ ನಿದ್ದೆ ಮಾಡುತ್ತಾ, ಕೆರೆ ಕೊಳ್ಳ ಬಾವಿಗಳಲ್ಲಿ ಮೀಯುತ್ತಾ,
ಬದುಕಿನ ಬಂಡಿ ಎಳೆಯುತ್ತಾ ಸಾಗುತ್ತಿದ್ದಾ ಅಯ್ಯಗಳವರು……….

ಬರಿಗಾಲಿನಲ್ಲಿ, ಕಲ್ಲು ಮುಳ್ಳುಗಳ ಹಾದಿಯಲ್ಲಿ ಸಾಗುತ್ತಾ, ದೇವರ ನಾಮಗಳನ್ನು ಗುನುಗುತ್ತಾ,
ನಾಯಿ ಹಾವು ಮೊಲ ನವಿಲು ಕಾಡು ಪ್ರಾಣಿಗಳ ಕ್ರಿಯೆಗೆ ಪ್ರತಿಕ್ರಿಯಿಸುತ್ತಾ,
ಸಾಗುವ ವಿಸ್ಮಯದ ಬದುಕು ಈ ಬಳೆಗಾರರದು………..

ಬಳೆ ಅಮ್ಮಾ ಬಳೆ,
ಬಳೆ ಅಮ್ಮಾ ಬಳೆ,
ಎಂದು ಕೂಗುತ್ತಾ ಹಳ್ಳಿ ಪ್ರವೇಶಿಸುವ ಈತ, ಯಾರದೋ ಮನೆಯ ಜಗುಲಿಯ ಮೇಲೆ ಚೀಲವನ್ನು ಇಳಿಸಿದರೆ ಆ ಸುದ್ದಿ ಯಾವ ಮಾಯೆಯಲ್ಲೋ
ಹಳ್ಳಿಯ ಎಲ್ಲಾ ಹೆಣ್ಣುಮಕ್ಕಳಿಗೆ ತಲುಪುತ್ತಿತ್ತು……..

ಸಾಸಿವೆ ಡಬ್ಬಿಯಲ್ಲಿ ಅಡಗಿಸಿದ್ದ ಚಿಲ್ಲರೆ ಹಣದೊಂದಿಗೆ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳೊಂದಿಗೆ ಬಳೆಗಾರನ ಬಳಿ ಹಾಜರು…………

ಜಗುಲಿಯ ಮನೆಯವರು ನೀಡಿದ ನೀರು ಕುಡಿದು ಸುಧಾರಿಸಿಕೊಂಡ ಬಳೆಗಾರ ಚೀಲ ಬಿಚ್ಚಿ ನೀಟಾಗಿ ಬಳೆಗಳನ್ನು ಹರಡುವನು……..

ಕೆಂಪು ಹಸಿರು ನೀಲಿ ಹಳದಿ ಕಪ್ಪು ಸೇರಿ ಕಾಮನಬಿಲ್ಲಿನ ಬಳೆಗಳ ರಾಶಿ
ಹೆಣ್ಣು ಮಕ್ಕಳ ಕಣ್ಣಿಗೆ ಹಬ್ಬ.
ಅಷ್ಟು ಇಷ್ಟು ಚೌಕಾಸಿಯ ನಂತರ,
ಹುಸಿ ಕೋಪ ತುಸು ನಗುವಿನ ಮುಖ ಭಾವ, ಮುಚ್ಚು ಮರೆಯ ಪಿಸು ಮಾತಾದ ಮೇಲೆ ಬೆಲೆ ನಿಗದಿ ಡಜನ್ ಅರ್ಧ ಡಜನ್ ಗಳ ಲೆಕ್ಕದಲ್ಲಿ…..

ಬೆಳ್ಳಗಿನ ಕಪ್ಪಗಿನ ಗೋದಿ ಮೈಬಣ್ಣದ ಕೈಗಳು, ಸಣ್ಣ ದಪ್ಪ ಆಕಾರದ,
ಮೃದು ಒರಟು ಚರ್ಮದ ಉಬ್ಬಿದ ನರಗಳ ಕೈಗಳು…….

ತೊಡಸುವಾಗಿನ ಸಂಭ್ರಮ ನಗು ಜೊತೆಗೆ ಬಳೆ ಒಡೆಯುವುದು ಗಾಯವಾಗುವುದು ಅಳುವುದು ಕೊಂಕು ಮಾತುಗಳು ಸಮಾಧಾನದ ನುಡಿಗಳು ಹೀಗೆ ಹತ್ತು ಹಲವಾರು ಭಾವಗಳು…….

ಮಕ್ಕಳೇ,
ಇ ಮೇಲ್ ವಾಟ್ಸಪ್ ಮೊಬೈಲುಗಳಿಲ್ಲದ ಕಾಲದಲ್ಲಿ ಬಳೆಗಾರ ಚೆನ್ನಯ್ಯನೇ,
ಸಂದೇಶ ವಾಹಕ – ಸಂಬಂಧಗಳ ಜೋಡಕ……….

ಗಂಡಿಗೆ ಹೆಣ್ಣು – ಹೆಣ್ಣಿಗೆ ಗಂಡು,
ಬಸುರಿ ತಂಗಿಯ ಬಯಕೆಗಳು,
ಬಾಣಂತಿ ಅಕ್ಕನ ಯೋಗಕ್ಷೇಮ,
ತಂದೆ ತಾಯಿ ಆರೋಗ್ಯ,
ಅಣ್ಣ ತಮ್ಮನ ಮದುವೆ ಮುಂಜಿಗಳು,
ಅತ್ತಿಗೆ ನಾದಿನಿಯರ ಪ್ರೀತಿ ದ್ವೇಷ,
ಅತ್ತೆ ಮಾವಂದಿರ ಕಾಟ,
ವರದಕ್ಷಿಣೆ ಕಿರುಕುಳ,
ಹಿರಿಯರ ಸಾವು,
ಮಳೆ ಬೆಳೆಗಳ – ದನ ಕರುಗಳ ಪರಿಸ್ಥಿತಿ ಎಲ್ಲವೂ ಈ ಬಳೆಗಾರ ಚೆನ್ನಯ್ಯನ ಬಾಯಲ್ಲಿ ರವಾನೆಯಾಗುತ್ತಿತ್ತು…….

ಪತ್ರಗಳೂ ತಲುಪದ ಹಳ್ಳಿಗಳಲ್ಲಿ ಶಬರಿಯಂತೆ ತವರಿನ ಸಂದೇಶಕ್ಕಾಗಿ ಕಾಯುತ್ತಿದ್ದುದು ಈ ಬಳೆಗಾರನಿಗಾಗಿ……….

ಅತ್ತವರೊಂದಿಗೆ ಅಳುತ್ತಾ,
ನಕ್ಕವರೊಂದಿಗೆ ನಗುತ್ತಾ,
ಕೋಪಗೊಂಡವರನ್ನು ಸಮಾಧಾನಿಸುತ್ತಾ,
ದುಃಖಿತರಿಗೆ ಮಡಿಲಾಗುತ್ತಾ,
ಕಳೆದುಕೊಂಡವರಿಗೆ ತತ್ವಜ್ಞಾನಿಯಾಗುತ್ತಾ,
ಅಣ್ಣನಾಗಿ, ತಂದೆಯಾಗಿ, ತಮ್ಮನಾಗಿ, ಹಿರಿಯನಾಗಿ, ಹಿತೈಷಿಯಾಗಿ, ಆಪದ್ಭಾಂಧವನಾಗಿ, ಅನಾಥ ರಕ್ಷಕನಾಗಿ, ನಾರದನಾಗಿ ನಾನಾ ಪಾತ್ರ ನಿರ್ವಹಿಸುತ್ತಾ ಸಾಗುವ……

ಬಳೆಗಾರ ಚೆನ್ನಯ್ಯ ನೀ ಎಲ್ಲಿ ಹೋದೆ………

ಹಿಗ್ಗಿದೆ ಇಂಟರ್ನೆಟ್ ಬಂದಾಗ,
ಕುಗ್ಗಿದೆ ಅದರ ಒತ್ತಡ ಹೆಚ್ಚಾದಾಗ,
ನೆನಪಾದೆ ನೀನಾಗ,
ಬಳೆಗಾರ ಚೆನ್ನಯ್ಯ…..

ಭಾವಗೀತೆಗಳ ಭಾವ ಪ್ರವಾಹದೊಂದಿಗೆ ನೆನಪಿನ ಬುತ್ತಿ ತೆರೆಯುತ್ತಾ ಮಳೆಯ ನಡುವೆಯೇ ಹೆಜ್ಜೆ ಹಾಕುತ್ತಾ ಮನೆಯ ಕಡೆ ನಡೆದೆ……….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...