ATNCC College Shivamogga ಆರೋಗ್ಯ ಉತ್ತಮ ಆಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಆರೋಗ್ಯ ಸಂಪತ್ತಿನ ಮುಂದೆ ಎಲ್ಲವೂ ಶೂನ್ಯ. ಪ್ರತಿಯೊಬ್ಬರೂ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಓಂಪ್ರಕಾಶ್ ರಾಜೋಳೆ ಹೇಳಿದರು.
ಶಿವಮೊಗ್ಗ ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಎನ್‌ಎಸ್‌ಎಸ್, ಐಕ್ಯೂಎಸಿ, ರೆಡ್‌ಕ್ರಾಸ್ ಮತ್ತು ಎನ್‌ಸಿಸಿ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಜೀವನಶೈಲಿ ಹಾಗೂ ಬದಲಾದ ಆಹಾರ ಪದ್ಧತಿಗಳಿಂದ ಆರೋಗ್ಯದ ಮೇಲೆ ನಿರಂತರ ಏರುಪೇರು ಆಗುವುದನ್ನು ನಾವು ಕಾಣುತ್ತೇವೆ. ಪ್ರತಿಯೊಬ್ಬರು ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸದೃಢ ಆರೋಗ್ಯಕ್ಕೆ ಪೂರಕ ಆಗಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.
ATNCC College Shivamogga ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಜಿ.ಬಿ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿ ನಿತ್ಯ ಒಂದು ಗಂಟೆ ವ್ಯಾಯಾಮ, ಯೋಗ, ಧ್ಯಾನ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಟಿವಿ,ಊ ಮೊಬೈಲ್, ಕಂಪ್ಯೂಟರ್ ಬಳಕೆ ಕಡಿಮೆ ಮಾಡಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಜಂಕ್ ಫುಡ್‌ಗಳನ್ನು ಸೇವನೆ ಕಡಿಮೆ ಮಾಡಿ ತರಕಾರಿ, ಸೊಪ್ಪು ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಒತ್ತಡಮುಕ್ತ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯ ಪ್ರೊ. ಕಾಜಿಂ ಷರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಆರೋಗ್ಯ ಶಿಬಿರಕ್ಕೆ ಸಹಕಾರ ನೀಡಲಾಯಿತು. ಡಾ. ಸಹಿದಾ ಅಮೀನ್, ಡಾ. ಸಿಂಧು, ಡಾ. ಆಶಾ ಕಿರಣ್, ಡಾ. ಶ್ವೇತಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.