KSRTC Bus ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2023-24ನೇ ಸಾಲಿಗೆ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ರಿಯಾಯಿತಿ ದರದ ಬಸ್ ಪಾಸ್ ವಿತರಣೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಜೂನ್ 12ರಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಯಾವುದೇ ಶುಲ್ಕ ಪಾವತಿಸದೇ ಉಚಿತವಾಗಿ ಅರ್ಜಿ ಸಲ್ಲಿಸಿ ಬಸ್‌ಪಾಸ್ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂಧಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ.
ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಸರ್ಕಾರದ ಆದೇಶದಂತೆ ರೂ.30/- ಸೇವಾ ಶುಲ್ಕವನ್ನು ಸದರಿ ಕೇಂದ್ರಗಳ ಸಿಬ್ಬಂಧಿಗಳು ಪಡೆಯಲು ಅವಕಾಶವಿರುತ್ತದೆ. ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ಹೆಸರು, ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮುಖೇನ ಕಳುಹಿಸಲಾಗುವುದು.
ತದನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ತೆರಳಿ, ನಿಗಧಿತ ಪಾಸಿನ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್‌ಕಾರ್ಡ್, ಯುಪಿಐ ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ.
KSRTC Bus ರಾಜ್ಯದ ಮಹಿಳೆಯರಿಗೆ ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಲಾಗಿದೆ. ನೆರೆ ರಾಜ್ಯದ ವಿದ್ಯಾರ್ಥಿನಿಯರು ರಾಜ್ಯದ ಶಾಲೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ವಿದ್ಯಾರ್ಥಿ ಪಾಸುಗಳನ್ನು ಪಡೆಯುವುದು ಕಡ್ಡಾಯವಾಗಿದೆ.
ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ. ಜಿಲ್ಲೆಯ ವಿದ್ಯಾರ್ಥಿಗಳು ಆನ್‌ಲೈನ್ ಅಥವಾ ಗ್ರಾಮ ಒನ್/ಕರ್ನಾಟಕ ಒನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ಪಡೆಯಲು ಕರ್ನಾಟಕ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಶಿವಮೊಗ್ಗ, ಶಿಕಾರಿಪುರದ ಬಸ್‌ನಿಲ್ದಾಣ, ಹಳೆ ನಗರ ಭದ್ರಾವತಿಯ ತಾಲೂಕು ಕಚೇರಿ ರಸೆ, ಸಾಗರದ ತಾಲೂಕು ಕಚೇರಿ ಎದುರು ಹಾಗೂ ಹೊನ್ನಾಳಿಯ ತಾಲೂಕು ಕಚೇರಿ ಎದುರಿನಲ್ಲಿರುವ ಕರ್ನಾಟಕ ಒನ್ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
10 ತಿಂಗಳ ಪಾಸ್‌ಗಾಗಿ ಪ್ರಾಥಮಿಕ ಶಾಲೆಯ ಸಾಮಾನ್ಯ ವಿದ್ಯಾರ್ಥಿಗಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ರೂ.180/-, ಪ್ರೌಢಶಾಲಾ ಸಾಮಾನ್ಯ ಬಾಲಕರು ರೂ.750/- ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಾಲಕರು ರೂ.150/-, ಪ್ರೌಢಶಾಲಾ ಸಾಮಾನ್ಯ ಬಾಲಕಿಯರು ರೂ.550/- ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಾಲಕಿಯರು ರೂ.150/-, ಕಾಲೇಜು-ಡಿಪ್ಲೋಮಾ ಸಾಮಾನ್ಯ ವಿದ್ಯಾರ್ಥಿಗಳು 1050/- ಹಾಗೂ ಪರಿಶಿಷ್ಟ ಪಂಗಡದ ಬಾಲಕಿಯರು ರೂ.150/-, ವೃತ್ತಿಪರ ಕೋರ್ಸುಗಳ ಸಾಮಾನ್ಯ ವಿದ್ಯಾರ್ಥಿಗಳು 1550/- ಹಾಗೂ ಪರಿಶಿಷ್ಟ ಪಂಗಡದ ಬಾಲಕಿಯರು ರೂ.150/-, ಸಂಜೆ ಕಾಲೇಜು/ಪಿ.ಹೆಚ್‌ಡಿ., ವಿದ್ಯಾರ್ಥಿಗಳು ರೂ.1250/- ಹಾಗೂ ಪರಿಶಿಷ್ಟ ಪಂಗಡದ ಬಾಲಕಿಯರು ರೂ.150/- ಮತ್ತು 12ತಿಂಗಳ ಅವಧಿಯ ಐಟಿಐ ವಿದ್ಯಾರ್ಥಿಗಳು ರೂ.1210/- ಪರಿಶಿಷ್ಟ ಪಂಗಡದ ಬಾಲಕಿಯರು ರೂ.160/-ಗಳ ಶುಲ್ಕವನ್ನು ರಸ್ತೆ ಸಾರಿಗೆ ನಿಗಮವು ನಿಗಧಿಪಡಿಸಿದೆ ಎಂದು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.