ರೋಗ ಗುರುತಿಸಿದ ನಂತರ ಅತ್ಯಲ್ಪ ಅವಧಿಯ ಹಾಗೂ ಸಕಾಲಿಕ ಚಿಕಿತ್ಸೆ ಪಡೆಯುವುದರಿಂದ ಕುಷ್ಟರೋಗದಿಂದ ಮುಕ್ತರಾಗಿ ನೆಮ್ಮದಿಯ ಹಾಗೂ ಆರೋಗ್ಯಯುಕ್ತ ಜೀವನವನ್ನು ಸಾಗಿಸಲು ಸಾಧ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಮ್ಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಟರೋಗ ನಿವಾರಣ ಕಾರ್ಯಕ್ರಮ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕುಷ್ಟರೋಗ ನಿವಾರಣ ಕಾರ್ಯಕ್ರಮದ ಅಂಗವಾಗಿ ಇಂದಿನಿಂದ ಜುಲೈ 06ರವರೆಗೆ ಪ್ರತಿದಿನ ಬೆಳಿಗ್ಗೆ 07ರಿಂದ 10ಗಂಟೆಯವರೆಗೆ ನಡೆಯಲಿರುವ ಕುಷ್ಟರೋಗ ಪತ್ತೆಹಚ್ಚುವ ಆಂದೋಲನಕ್ಕೆ ಶರಾವತಿ ನಗರದ ಚಾನಲ್ ಏರಿಯಾದ ಅಂಗನವಾಡಿ ಕೇಂದ್ರದಿಂದ ಚಾಲನೆ ನೀಡಿ ಮಾತನಾಡುತ್ತಿದ್ದರು.
Department of Health and Family Welfare ಕುಷ್ಟರೋಗಿಗಳನ್ನು ಪತ್ತೆಹಚ್ಚಲು ಈಗಾಗಲೇ ಜಿಲ್ಲೆಯ ಎಲ್ಲಾ ಆರೋಗ್ಯ ಮತ್ತು ಆಶಾ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಪ್ರತಿ ತಾಲೂಕಿಗೆ ಸುಮಾರು 300ಹೆಚ್ಚು ಜನರ ತಂಡ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ, ಕುಷ್ಟರೋಗಿಗಳನ್ನು ಗುರುತಿಸಿ, ಚಿಕಿತ್ಸೆ ಪಡೆದುಕೊಳ್ಳಲು ನೆರವಾಗಲಿದ್ದಾರೆ.
ಪ್ರತಿ ತಂಡಕ್ಕೆ ಓರ್ವ ಮೇಲ್ವಿಚಾರಕರು ಇದ್ದು, ತಾಲೂಕು ಆರೋಗ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ರೋಗ ಪತ್ತೆಹಚ್ಚುವ ಕಾರ್ಯಕ್ರಮ ನಡೆಸಲಾಗುವುದು. ಪ್ರಸ್ತುತ ಜಿಲ್ಲೆಯ 53 ಜನರು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲಿ ಕುಷ್ಟರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪರ್ಶರಹಿತ ಮಚ್ಚೆ, ದೇಹದ ಯಾವುದೇ ಭಾಗದಲ್ಲಿ ತಿಳಿಬಿಳಿ ಅಥವಾ ತಾಮ್ರ ಬಣ್ಣದ ಒಂದು ಅಥವಾ ಹಲವು ಮಚ್ಚೆಗಳು ಇದ್ದು, ಅವು ಸ್ಪರ್ಶಜ್ಞಾನ ಹೊಂದಿಲ್ಲದಿದ್ದರೆ, ಕೈಕಾಲುಗಳಲ್ಲಿ ಜೋಮು ಕಂಡುಬರುವ ಸೂಚನೆ ಇದ್ದವರು ಈ ಭೇಟಿ ಸಂದರ್ಭದಲ್ಲಿ ಆರೋಗ್ಯ ಸಹಾಯಕರು, ಆಶಾ ಹಾಗೂ ಸ್ವಯಂಸೇವಾ ಕಾರ್ಯಕರ್ತರುಗಳಿಂದ ಪರೀಕ್ಷಿಸಿ, ಖಚಿತವಾಗಿದ್ದರೆ ಯಾವುದೇ ಆತಂಕವಿಲ್ಲದೆ ಬಹುವಿಧ ಔಷಧಿ ಚಿಕಿತ್ಸೆಯಿಂದ ಈ ರೋಗವನ್ನು ಗುಣಪಡಿಸಿಕೊಳ್ಳಬಹುದಾಗಿದೆ ಎಂದರು.
ಈ ಕಾಯಿಲೆ ವಂಶಪಾರಂಪರ್ಯವಾಗಿ ಬರುವಂತಹದ್ದಲ್ಲ. ಲೆಪ್ರೆ ಎಂಬ ಸೂಕ್ಷ್ಮಾಣು ಬ್ಯಾಕ್ಟೀರಿಯಾ, ಮೈಕೋಬ್ಯಾಕ್ಟೀರಿಯಂ ಲೆಪ್ರೆನಿಂದ ಬರುವ ಕಾಯಿಲೆ ಇದಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ರೋಗಿಗಳ ಬಗ್ಗೆ ಬೇಧ-ಭಾವ, ತಾರತಮ್ಯ ತೋರುವುದು ಸಲ್ಲದು ಎಂದವರು ತಿಳಿಸಿದ್ದಾರೆ.
Department of Health and Family Welfare ಕುಷ್ಟರೋಗದಿಂದ ಅಂಗವಿಕಲತೆಯಾಗಿ ನರಳುತ್ತಿರುವವರು ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ. ಸೋಂಕಿತರಿಗೆ ಉಚಿತ ವೈದ್ಯಕೀಯ ಸಲಹೆ-ಸೂಚನೆಗಳಲ್ಲದೆ ಎಂ.ಸಿ.ಆರ್. ಪಾದರಕ್ಷೆ, ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಸೋಂಕಿನ ಅನುಮಾನ ಕಂಡುಬಂದಲ್ಲಿ ಮಚ್ಚೆಗಳನ್ನು ಗುಪ್ತವಾಗಿಟ್ಟುಕೊಳ್ಳದೆ ವೈದ್ಯರಿಗೆ ತೋರಿಸಿ, ರೋಗದ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದು ರೋಗವನ್ನು ನಿಯಂತ್ರಿಸಬಹುದಲ್ಲದೆ ಅಂಗವಿಕಲತೆಯನ್ನು ತಪ್ಪಿಸಬಹುದಾಗಿದೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ|| ಶಮಾಬೇಗಂ, ಡಾ|| ಚಂದ್ರಶೇಖರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಮಾಜಿ ಮೇಯರ್ ಶ್ರೀಮತಿ ಸುವರ್ಣಶಂಕರ್ ಸೇರಿದಂತೆ ವೈದ್ಯಕೀಯ ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಮತ್ತು ಆಶಾ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.