Kannada Sahitya Parishath ಕನ್ನಡದ ಮನಗಳು ಒಗ್ಗೂಡಿದಲ್ಲಿ ಮಾತ್ರ ಕನ್ನಡತನವನ್ನು ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಪರಿಷತ್ತಿನ ಸದಸ್ಯನಾಗಿ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಕಲ್ಯಾಣನಗರದ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂ ದ ಏರ್ಪಡಿಸಲಾಗಿದ್ದ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕನ್ನಡದ ಕಂಪನ್ನು ಹರಡಿಸುವ ಸಲುವಾಗಿ ತಾವು ಪ್ರತಿ ಮನೆಮನೆಗೂ ತೆರಳಲು ಸಿದ್ಧ. ಹೋಬಳಿ ಮಟ್ಟದಲ್ಲಿ ನೆಲೆಯೂರುವ ಮೂಲಕ ಪರಿಷತ್‌ನ್ನು ಮನೆ ಹಾಗೂ ಮನಸ್ಸಿನಲ್ಲಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಹುಟ್ಟಿನಿಂದಲೇ ಯಾರೂ ಕಿಚ್ಚನ್ನು ಹೊತ್ತಿಸಿಕೊಂಡವರಲ್ಲ. ಆದರೆ ಜೀವನದ ಒಂದು ತಿರುವು ಅವರನ್ನು ಕನ್ನಡಕ್ಕಾಗಿ ಹೋರಾಡುವಂತೆ ಮಾಡಿತು. ಆಲೂರು ವೆಂಕಟರಾಯರು ಅದರಲ್ಲಿ ಮೊದಲಿಗರು. ರಾ.ಮ. ದೇಶಪಾಂಡೆಯವರ ಹೋರಾಟ ಇವರೊಂದಿಗೆ ಮ.ರಾಮಮೂರ್ತಿ ಹೀಗೆ ಕನ್ನಡಿಗರ ಶ್ರಮದಿಂದ ಇಂದು ಕನ್ನಡ ಸಾಹಿತ್ಯ ಪರಿಷತ್ತು 109 ವರ್ಷಗಳ ಕಾಲ ಉಳಿದು ಬೆಳೆದಿದೆ ಎಂದರು.
Kannada Sahitya Parishath ಸಾಹಿತಿ ಶ್ರೀಮತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಪರಿಷತ್ತನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೂ ವಿಸ್ತರಿಸಿದರೆ ಮಾತ್ರ ಯುವ ಸಮೂಹವನ್ನು ಕನ್ನಡದತ್ತ ಸೆಳೆಯಲು ಸಾಧ್ಯ.. ಈಗಾಗಲೇ ಕೇಂದ್ರ ಉನ್ನತ ಶಿಕ್ಷಣ ಇಲಾಖೆಯು ತಂತ್ರಜ್ಞಾನದ ವಿಷಯಗಳನ್ನು ಅನುವಾದಿ ಸುತ್ತಿರುವುದು ಕನ್ನಡದ ಮಕ್ಕಳಿಗೆ ಸಮಾಧಾನ ಮೂಡಿಸುವ ವಿಷಯ ಎಂದು ತಿಳಿಸಿದರು.
ಇದೇ ವೇಳೆ ಕಸಾಪ ಹಿರಿಯ ಸದಸ್ಯರಾದ ಎಸ್.ಎಂ.ಮಲ್ಲೇಶಪ್ಪ, ಬಾಣೂರು ಚನ್ನಪ್ಪ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಹಿತ್ಯ ಹಾಗೂ ಸಾಂಸ್ಕ್ರೃತಿಕ ಸಂಘದ ಅಧ್ಯಕ್ಷ ಎಸ್.ಎಂ.ಲೋಕೇಶ್, ಕಸಾಪ ಮುಖಂಡರುಗಳಾದ ಹೆಚ್.ಎಸ್.ಮಂಜುನಾಥ್, ಕಳವಾಸೆ ರವಿ, ವೀಣಾ ಅರವಿಂದ್, ವೀಣಾ ಮಲ್ಲಿಕಾರ್ಜುನ್, ವೀರೇಶ್ ಕೌಲಗಿ ಮತ್ತಿತರರು ಉಪಸ್ಥಿತರಿದ್ದರು.