Chamber Of Commerce ವಿದ್ಯುತ್ ದರ ಹೆಚ್ಚಳ, ನಿಗಧಿತ ದರ ಕೂಡ ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆ, ಉದ್ಯಮಗಳಿಗೆ ತೊಂದರೆ ಉಂಟಾಗಲಿದ್ದು, ಮುಚ್ಚಿಹೋಗುವ ಸಾಧ್ಯತೆ ಇದೆ. ಕೈಗಾರಿಕೆ ಉದ್ಯಮಗಳ ಉಳಿವಿಗಾಗಿ ದರ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿರುವುದು ಕೈಗಾರಿಕೆ, ಉದ್ದಿಮೆಗಳಿಗೆ ಮಾತ್ರವಲ್ಲ. ಗೃಹೋಪಯೋಗಿ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಪ್ರಸ್ತುತ ವಿದ್ಯುತ್ ದರ ಏರಿಕೆಯಿಂದ ಆಗಿರುವ ಸಮಸ್ಯೆಗಳನ್ನು ಗಮನಿಸಿ ಕೂಡಲೇ ದರ ಇಳಿಸಬೇಕು ಎಂದು ತಿಳಿಸಿದರು.
Chamber Of Commerce ವಿದ್ಯುತ್ ದರ ವಿಚಾರದಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿ ನಿಗಧಿತ ದರ ಕೂಡ ಹೆಚ್ಚಿಸಿದ್ದು, ಇದರಿಂದ ಉದ್ಯಮಗಳಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಉದ್ದಿಮೆಗಳು ಮುಚ್ಚಿಹೋಗುವ ಸಾಧ್ಯತೆ ಇರುವುದರಿಂದ ದರ ಕಡಿಮೆ ಮಾಡಬೇಕು ಅಥವಾ ಸರ್ಕಾರದಿಂದ ನಿಗಧಿತ ದರದ ಸಬ್ಸಿಡಿ ನೀಡಬೇಕು ಎಂದು ಅಧಿಕಾರಿಗಳಿಗೆ ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಮೆಸ್ಕಾಂ ಅಧಿಕಾರಿಗಳು ಪ್ರತಿಕ್ರಿಯಿಸಿ, ಪ್ರಸ್ತುತ ವಿದ್ಯುತ್ ದರ ಹೆಚ್ಚಾಗಿರುವ ಹಾಗೂ ದರ ಹೆಚ್ಚಳ ಮಾಡುವ ಸಮಯದಲ್ಲಿ ಪಾಲಿಸುವ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುವುದು. ಕೆಇಆರ್‌ಸಿ ಸ್ವಾಯತ್ತ ಸಂಸ್ಥೆಯು ವಿದ್ಯುತ್ ದರ ಪರಿಷ್ಕರಣೆಯ ನಿರ್ಧಾರ ತೆಗೆದುಕೊಳ್ಳುತ್ತದೆ. ಕೆಇಆರ್‌ಸಿ ಆದೇಶವನ್ನು ಎಸ್ಕಾಂಗಳು ಪಾಲಿಸುತ್ತವೆ ಎಂದು ಉತ್ತರಿಸಿದರು.
ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಎಫ್‌ಕೆಸಿಸಿ ವತಿಯಿಂದ ಜೂನ್ 22 ರಂದು ವಿದ್ಯುತ್ ದರ ಹೆಚ್ಚಳ ಸಂಬಂಧಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಜಿಲ್ಲಾ ಮಟ್ಟದಲ್ಲಿಯು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಎಫ್‌ಕೆಸಿಸಿ ಸಂಸ್ಥೆಯು ಮುಖ್ಯಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಕರಾತ್ಮಕ ಸ್ಪಂದನೆ ದೊರಕದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ತಿಳಿಸಿದರು.
ಮೆಸ್ಕಾಂ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ವೀರೇಂದ್ರ, ಎಇಇ ಸುರೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಬಿ.ಗೋಪಿನಾಥ್, ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ನಿರ್ದೇಶಕರಾದ ಗಣೇಶ್ ಎಂ ಅಂಗಡಿ, ಇ.ಪರಮೇಶ್ವರ್, ರಮೇಶ್ ಹೆಗಡೆ, ಮರಿಸ್ವಾಮಿ, ಸುಕುಮಾರ್, ಐಐಎಫ್ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್, ಸಂಯೋಜಿತ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ನಿರ್ದೇಶಕರು, ಕೈಗಾರಿಕೋದ್ಯಮಿ, ಆಟೋ ಕಾಂಪ್ಲೆಕ್ಸ್ ಅಧ್ಯಕ್ಷರು ಪದಾಧಿಕಾರಿಗಳು ಸಾಗರ ರಸ್ತೆ ಇಂಡಸ್ಟ್ರಿಯಲ್ ಏರಿಯಾದ ಅಧ್ಯಕ್ಷರು ಪದಾಧಿಕಾರಿಗಳು ಉದ್ಯಮಿಗಳು, ಮೆಸ್ಕಾಂ ಅಕೌಂಟ್ಸ್ ಆಫೀಸರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.