Kimmane Rathnakar ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪಿ ಎಸೈ ನೇಮಕಾತಿ ಹಗರಣವನ್ನು ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಕ್ಷೇತ್ರ ಕಾಂಗ್ರೆಸ್ ಘಟಕ ನಿರ್ಣಯಿಸಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಹೇಳಿದರು.
ತೀರ್ಥಹಳ್ಳಿಯ ಗಾಯತ್ರಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಗೆಲ್ಲಲು ಆರಗ ಜ್ಞಾನೇಂದ್ರ ಅವರು 68 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಚುನಾವಣೆಯಲ್ಲಿ ಜನರು ನನ್ನನ್ನು ಸೋಲಿಸಿಲ್ಲ. ಆರಗ ಜ್ಞಾನೇಂದ್ರ ಚೆಲ್ಲಿದ ಹಣ ನನ್ನನ್ನು ಸೋಲಿಸಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಬಡತನದ ಹೆಸರಲ್ಲಿ ರಾಜಕಾರಣ ಮಾಡಿದ ಆರಗ ಜ್ಞಾನೇಂದ್ರ, ಮತ್ತು ಅವರ ರಕ್ತ ಸಂಬಂಧಿಗಳು ಕೋಟ್ಯಾಂತರ ರೂಪಾಯಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೊಸ ಬೈಕ್ ಖರೀದಿಸಲು ಕೆಲ ಯುವಕರಿಗೆ ಮುಂಗಡವಾಗಿ 10,000, ಕೆಲವು ಮಹಿಳಾ ಸಂಘದ ಪದಾಧಿಕಾರಿಗಳಿಗೆ 5 ಸಾವಿರ ರೂ., ಜಾತಿ ಸಂಘಟನೆಯ ಕೆಲವು ಪ್ರಮುಖರಿಗೆ ಭಾರಿ ಮೊತ್ತದ ಹಣ, ಕೇರಿ ಕಾಲೋನಿಯ ಕೆಲವು ಪ್ರಮುಖರಿಗೆ ಹತ್ತರಿಂದ ಇಪ್ಪತ್ತು ಸಾವಿರ ಹಣಕೊಟ್ಟು ಆರಗ ಜ್ಞಾನೇಂದ್ರ ಅವರು ಆಮೀಷ ಒಡ್ಡಿದ್ದಾರೆ ಎಂದು ಹೇಳಿದರು.
Kimmane Rathnakar ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆಧಾರ ಇಲ್ಲದೆ ಯಾರೊಬ್ಬರ ಮೇಲೂ ದೂಷಣೆ ಮಾಡಬಾರದು. ಹೊಂದಾಣಿಕೆ ಮೂಲಕ ಕಾಂಗ್ರೆಸ್ ಬಲವರ್ಧನೆ ನಮ್ಮ ಗುರಿಯಾಗಬೇಕು. ಏನೇ ತೊಂದರೆಯಾದರೂ ಕಾರ್ಯಕರ್ತರು ತಕ್ಷಣ ಸಂಪರ್ಕಿಸಿ. ನಾನು ನಿಮ್ಮ ಜೊತೆ ಜೀವ ಇರುವವರೆಗೂ ಇರುತ್ತೇನೆ ಎಂದು ಕಿಮ್ಮನೆ ರತ್ನಾಕರ್ ಅವರು ಭರವಸೆ ನೀಡಿದರು.