JCI Shivamogga Malnad ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕವು ಜಿಲ್ಲಾಡಳಿತ ಶಿವಮೊಗ್ಗ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ದಿನಾಂಕ 29.04.2023 ರಂದು ಶಿವಮೊಗ್ಗದ ಸಿಟಿ ಸೆಂಟ್ರಲ್ ಶಾಪಿಂಗ್ ಮಾಲ್ ಇಲ್ಲಿ ಆಯೋಜಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮತದಾನ ನಮ್ಮ ಹಕ್ಕು, ಎಲ್ಲರೂ ತಪ್ಪದೇ ಮತದಾನ ಮಾಡೋಣ ಎಂದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸ್ನೇಹಲ್ ಸುಧಾಕರ್ ಲೋಕಂಡೆ ರವರು ನೆರೆದಿದ್ದ ಅಪಾರ ಜನರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ತಪ್ಪದೇ ಮತದಾನ ಮಾಡಲು ಕರೆ ನೀಡಿದರು. ಅಲ್ಲದೇ ಯಾವುದೇ ಆಮಿಷಗಳಿಗೆ ಒಳಗಾಗದೇ ತಪ್ಪದೇ ಮತದಾನ ಮಾಡುವ ಮುಖಾಂತರ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಮತದಾರರ ಪಾತ್ರ ಮಹತ್ತರವಾದುದು ಎಂದರು. ಯಾವುದೇ ಅಕ್ರಮಗಳು ಕಂಡು ಬಂದರೆ ಜಿಲ್ಲಾಡಳಿತಕ್ಕೆ, ಸಿ ವಿಜಿಲ್ ತಂಡಕ್ಕೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಿದರು.
ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿನೂತನ ಮತದಾನ ಜಾಗೃತಿಯ ಕಾರ್ಯಕ್ರಮವನ್ನು ವಿಶೇಷವಾಗಿ ಆನ್ಲೈನ್ ಮುಖಾಂತರ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಜೇ ಎಫ್ ಎಸ್ ಎಂ ಕೆ ಕಾರ್ತಿಕೇಯನ್ ರವರು ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ನಮಗೆ ಇರುವ ಬಲಿಷ್ಠ ಶಕ್ತಿ ಎಂದರೆ ಮತದಾನ, ಎಲ್ಲರೂ ತಪ್ಪದೇ ಮತದಾನ ಮಾಡಿ, ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಉತ್ತಮ ರೀತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಾಗಲಿ, ಈ ನಿಟ್ಟಿನಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ವತಿಯಿಂದ ಆಯೋಜಿಸಲಾಗಿರುವ ಮತದಾನ ಜಾಗೃತಿ ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದೆ, ವಲಯದ ಅಧ್ಯಕ್ಷರು, ಘಟಕದ ಅಧ್ಯಕ್ಷರು, ಪೂರ್ವಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರೂ ಸೇರಿ ಅದ್ಭುತ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಮೊದಲ ಭಾಗವಾಗಿ ದಿನಾಂಕ: 29.04.2023 ರ ಬೆಳಿಗ್ಗೆ ಶಿವಮೊಗ್ಗದ ರೈಲ್ವೇ ಸ್ಟೇಷನ್ ನಲ್ಲಿ ಮತದಾನ ಜಾಗೃತಿಯ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಹಂಚಲಾಯಿತು. ಬೇರೆ ಊರುಗಳಿಗೆ ತೆರಳುತ್ತಿರುವ ಸಾರ್ವಜನಿಕರು ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ವಿನಂತಿಸಲಾಯಿತು.
ನಂತರ ಇದೇ ತಂಡ ಶಿವಮೊಗ್ಗದ ವಿನೋಬನಗರದಲ್ಲಿರುವ
ಎ ಪಿ ಎಂ ಸಿ ಆವರಣದಲ್ಲಿ ವರ್ತಕರಿಗೆ ಹಾಗೂ ಗ್ರಾಹಕರಿಗೆ, ಸಾರ್ವಜನಿಕರಿಗೆ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿ, ಕರಪತ್ರ ಹಂಚಲಾಯಿತು.
ಇದೇ ದಿನ ಸಂಜೆ ಸಿಟಿ ಸೆಂಟ್ರಲ್ ಶಾಪಿಂಗ್ ಮಾಲ್ ನಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಜ್ಯೂನಿಯರ್ ಜೇಸಿ ವಿಭಾಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತ ವಿಷಯದ ಮೇಲೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ 6ನೆಯ ತರಗತಿಯಿಂದ 8 ನೆಯ ತರಗತಿಯ ವಿಭಾಗದಲ್ಲಿ ನಂದನ ಎಜುಕೇಶನ್ ಟ್ರಸ್ಟ್ ನ 8 ನೆಯ ತರಗತಿಯ ವಿದ್ಯಾರ್ಥಿನಿ ಮಹತಿ ಎಂ ದೀಕ್ಷಿತ್ ಪ್ರಥಮ ಸ್ಥಾನ, ಓಪನ್ ಮೈಂಡ್ಸ್ ಶಾಲೆಯ 6 ನೆಯ ತರಗತಿ ವಿದ್ಯಾರ್ಥಿನಿ ಅನನ್ಯ ಎಂ ಬೀ ದ್ವಿತೀಯ ಹಾಗೂ ವಿಕಾಸ ಶಾಲೆಯ 8 ನೆಯ ತರಗತಿಯ ವಿದ್ಯಾರ್ಥಿನಿ ಸ್ವರ ಜಿ ಹೆಗ್ಡೆ ತೃತೀಯ ಸ್ಥಾನ ಗಳಿಸಿದರು.
JCI Shivamogga Malnad 9 ನೆಯ ತರಗತಿ ಮತ್ತು 10 ನೆಯ ತರಗತಿಯ ವಿಭಾಗದಲ್ಲಿ ಸಾಂದೀಪನಿ ಶಾಲೆಯ 10 ನೆಯ ತರಗತಿಯ ವಿದ್ಯಾರ್ಥಿನಿ ಪ್ರಣಮ್ಯ. ಆರ್ ಪ್ರಥಮ ಸ್ಥಾನ, ಭಾರತೀಯ ವಿದ್ಯಾ ಭವನ ಶಾಲೆಯ 10 ನೆಯ ತರಗತಿ ವಿದ್ಯಾರ್ಥಿನಿ ಶಾರ್ವರಿ. ಡಿ ದ್ವಿತೀಯ ಹಾಗೂ ಪೋದಾರ್ ಶಾಲೆಯ 9 ನೆಯ ತರಗತಿಯ ವಿದ್ಯಾರ್ಥಿನಿ ಅಕ್ಷತಾ ಎಸ್ ಎಸ್ ತೃತೀಯ ಸ್ಥಾನ ಪಡೆದರು.
ಪಿಯುಸಿ ವಿಭಾಗ ದಲ್ಲಿ ವಿಕಾಸ ಕಾಲೇಜಿನ ಎರಡನೇ ಪಿಯುಸಿ ವಿದ್ಯಾರ್ಥಿನಿ ಕೃತಿ ಎಸ್ ಕುಲಕರ್ಣಿ ಪ್ರಥಮ ಹಾಗೂ ಕಸ್ತೂರ ಬಾ ಕಾಲೇಜಿನ ಎರಡನೇ ಪಿಯುಸಿ ವಿದ್ಯಾರ್ಥಿನಿ ಶರದಿ ವಿಠ್ಠಲ್ ಪಿ ವೈ ದ್ವಿತೀಯ ಸ್ಥಾನ ಪಡೆದರು.
ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ನಂತರ, ವೇದಿಕೆ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರಖ್ಯಾತ ನೃತ್ಯ ಶಾಲೆ ಸ್ಟೆಪ್ ಹೋಲ್ಡರ್ಸ್ ತಂಡದವರಿಂದ ಸಾಮೂಹಿಕ ನೃತ್ಯವು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಜಾದೂ ಕಾರ್ಯಕ್ರಮ, ಶಿವಮೊಗ್ಗದ ಪ್ರಖ್ಯಾತ ಜಾದೂಗಾರರಾದ ಶ್ರೀ ಪ್ರಶಾಂತ್ ಹೆಗ್ಡೆಯವರು ಅತ್ಯುತ್ತಮ ಜಾದೂ ಕಾರ್ಯಕ್ರಮ ನಡೆಸಿಕೊಟ್ಟರು, ಮಾಲ್ ನಲ್ಲಿ ನೆರೆದಿದ್ದ ಮಕ್ಕಳು, ಹಿರಿಯರು ಖುಷಿ ಪಟ್ಟರಲ್ಲದೆ, ಜಾದೂ ಮೂಲಕ ಮತದಾನ ಜಾಗೃತಿ ಮೂಡಿಸುವಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ತಂಡ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡುವ ಗೊಂಬೆ ಪ್ರದರ್ಶನವನ್ನೂ ಶ್ರೀ ಚೇತನ್ ರಾಯನಹಳ್ಳಿ ರವರು ಅದ್ಭುತವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಯುವ ಗಾಯಕಿ ಕುಮಾರಿ ಸುನಿಧಿ ರವರು ತಮ್ಮ ಕಂಠಸಿರಿಯಿಂದ ಉತ್ತಮ ಗೀತೆಗಳನ್ನು ಹಾಡಿ ನೆರೆದಿದ್ದ ಅಪಾರ ಜನರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ವಲಯ-24 ರ ಅಧ್ಯಕ್ಷರಾದ ಜೇಸಿ ಅನೂಷ ಗೌಡ ರವರು ಮಾತನಾಡಿ ಅದ್ಭುತ ಕಾರ್ಯಕ್ರಮ ಆಯೋಜಿಸಿರುವ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದರು, ಇದೊಂದು ಮಾದರಿ ಕಾರ್ಯಕ್ರಮ, ಶಿವಮೊಗ್ಗದಲ್ಲಿ ಮತದಾನ ಪ್ರಮಾಣ ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಎಲ್ಲರೂ ತಪ್ಪದೇ ಮತದಾನ ಮಾಡೋಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಅಧ್ಯಕ್ಷ ರಾದ ಜೇ ಸಿ ಕಿರಣ್ ಎನ್ ಪಿ, ರವರು ಮತದಾನ ದಿನದಂದು ರಜೆಯಿರುತ್ತದೆ ಎಂದು ತಿಳಿದು ಪ್ರವಾಸ ಹೋಗದೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿದು ತಪ್ಪದೇ ಮತದಾನ ಮಾಡೋಣ, ಅಲ್ಲದೇ ನಮ್ಮ ಕುಟುಂಬದವರು ಮತ್ತು ನೆರೆಹೊರೆಯವರಿಗೆ ಮತದಾನ ಮಾಡುವಂತೆ ಪ್ರೇರೇಪಿಸೋಣ ಎಂದು ತಿಳಿಸಿ, ಕಾರ್ಯಕ್ರಮದ ಆಯೋಜನೆಗೆ ಅನುಮತಿ ನೀಡಿ ಸಹಕರಿಸಿದ ಮಾನ್ಯ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಾರಿಗಳು, ಶಿವಮೊಗ್ಗ ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರ ಪಾಲಿಕೆ, ಚುನಾವಣಾಧಿಕಾರಿಗಳು, ಶಿವಮೊಗ್ಗ ಮತ್ತು ರೈಲು ನಿಲ್ದಾಣದ ಅಧಿಕಾರಿಗಳು,
ಎ ಪಿ ಎಂ ಸಿ ಯ ವರ್ತಕರಿಗೆ, ಪ್ರಮುಖವಾಗಿ ಸಿಟಿ ಸೆಂಟ್ರಲ್ ಶಾಪಿಂಗ್ ಮಾಲ್ ನ ವ್ಯವಸ್ಥಾಪಕರಿಗೆ ಧನ್ಯವಾದ ತಿಳಿಸಿದರು. ಭಾಗವಹಿಸಿದ ಎಲ್ಲಾ ಕಲಾ ತಂಡಗಳಿಗೆ, ನೆರೆದಿದ್ದ ಅಪಾರ ಜನರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಅಧ್ಯಕ್ಷರಾದ ಜೇ ಸಿ ಕಿರಣ್ ಎನ್ ಪಿ, ನಿಕಟ ಪೂರ್ವ ಅಧ್ಯಕ್ಷರಾದ ಜೇ ಸಿ ಪ್ರದೀಪ್ ಎಸ್, ಮಹಿಳಾ ವಿಭಾಗದ ಅಧ್ಯಕ್ಷರಾದ ಜೇಸಿ ಶೃತಿ ಅಶೋಕ್, ಜ್ಯೂನಿಯರ್ ಜೇಸಿ ವಿಭಾಗದ ಅಧ್ಯಕ್ಷರಾದ ಜೇಜೆಸಿ ವೈಷ್ಣವಿ ಕೆ ಎನ್, ಕಾರ್ಯದರ್ಶಿಗಳಾದ ಜೇಸಿ ಘನಶ್ಯಾಮ ಗಿರಿಮಾಜಿ, ಕಾರ್ಯಕ್ರಮ ನಿರ್ದೇಶಕರಾದ ಜೇಸಿ ಗಿರೀಶ್ ಒಡೆಯರ್, ಪೂರ್ವಾಧ್ಯಕ್ಷರುಗಳು,
ವಲಯ ಮಂಡಳಿ ಸದಸ್ಯರು, ಘಟಕದ ಕಾರ್ಯಕಾರಿ ಮಂಡಳಿ ಸದಸ್ಯರು, ಮಹಿಳಾ ವಿಭಾಗದ ಎಲ್ಲಾ ಸದಸ್ಯರು, ಮಕ್ಕಳು ಹಾಗೂ ಶಿವಮೊಗ್ಗ ನಗರದ ಎಲ್ಲಾ ಜೆಸಿಐ ಘಟಕಗಳ ಅಧ್ಯಕ್ಷರು ಮತ್ತು ಸದಸ್ಯರು ಆಗಮಿಸಿದ್ದರು.
ಕಾರ್ಯಕ್ರಮವನ್ನು ಜೇಸಿ ಚಂದ್ರಶೇಖರ್ ಮತ್ತು ಕುಮಾರಿ ಶ್ರಾವ್ಯ ನಿರೂಪಿಸಿ, ಜೆಸಿಐ ಶಿವಮೊಗ್ಗ ಮಲ್ನಾಡ್ ಘಟಕದ ಅಧ್ಯಕ್ಷರಾದ ಜೇಸಿ ಕಿರಣ ಎನ್ ಪಿ ಸ್ವಾಗತಿಸಿ, ಜೇಸಿ ಘನಶ್ಯಾಮ ಗಿರಿಮಾಜಿ ವಂದಿಸಿದರು.