Sri Shankaracharya ಪ್ರತಿವರ್ಷ ವೈಶಾಖಮಾಸದ ಶುಕ್ಲಪಕ್ಷದ ಪಂಚಮಿ
ಯಂದು ಶ್ರೀಶಂಕರಭಗವತ್ಪಾದರ ಜಯಂತಿಯನ್ನು
ಆಚರಿಸಲಾಗುತ್ತದೆ.
ಶ್ರೀಶಂಕರಾಚಾರ್ಯರು ಅದ್ವೈತಮತ ಸಿದ್ಧಾಂತದ
ಸ್ಥಾಪಕರು.ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀಶಂಕ
ರಾಚಾರ್ಯರು ಮೊದಲಿಗರು.
ಇವರು ಕೇರಳ ರಾಜ್ಯದ ಕಾಲಟಿ ಎನ್ನುವ ಹಳ್ಳಿಯಲ್ಲಿ
ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು.
ತಂದೆ ಶಿವಗುರು,ತಾಯಿ ಆರ್ಯಾಂಬೆ ಎನ್ನುವ ಹೆಸರಿನವರು.
ತಂದೆಯನ್ನು ಬಹಳ ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡರು.ತಾಯಿಯ ಆರೈಕೆಯಲ್ಲಿ ಬೆಳೆದವರು.ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ತಳೆದ ಇವರು
ಸನ್ಯಾಸ ಜೀವನದ ಕಡೆಗೆ ಒಲವು ತೋರಿದರು.ಆದರೆ
ಒಬ್ಬನೇ ಮಗನಾಗಿದ್ದ ಶಂಕರರನ್ನು ಸನ್ಯಾಸಿಯಾಗಿ
ನೋಡಲು ತಾಯಿಗೆ ಮನಸ್ಸಿರಲಿಲ್ಲ.ಹಾಗಾಗಿ ತಾಯಿಯ ಮನವೊಲಿಸಲು ಬಹಳ ಕಷ್ಟ ಪಡಬೇಕಾಯಿತು.ತಾಯಿಗೆ ಅವರ ಅಂತಿಮ ಕ್ಷಣದಲ್ಲಿ
Sri Shankaracharya ತಾನು ಎಲ್ಲಿದ್ದರೂ ಬರುವುದಾಗಿ ಮಾತು ಕೊಟ್ಟು,
ಶಂಕರರು ಸೂಕ್ತ ಗುರುವನ್ನು ಹುಡುಕುತ್ತಾ ಹೊರಡುತ್ತಾರೆ.ತಾಯಿಗೆ ಕೊಟ್ಟ ಮಾತಿನಂತೆ ಆಕೆಯ
ಅಂತಿಮ ಕಾಲದಲ್ಲಿ ಕಾಲಟಿಗೆ ಹಿಂದಿರುಗಿ ತಾಯಿಯ
ಅಂತಿಮ ವಿಧಿಗಳನ್ನು ಪೂರೈಸುತ್ತಾರೆ.ನರ್ಮದಾ ನದೀ
ತೀರದಲ್ಲಿದ್ದ ಶ್ರೀಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತಮ್ಮ ಗುರುಗಳನ್ನಾಗಿ ಪಡೆಯುತ್ತಾರೆ.ಗುರುಗಳಿಂದ ವೇದಾಂತ ಶಾಸ್ತ್ರಗಳನ್ನು ಅಭ್ಯಾಸಮಾಡಿದ ನಂತರ
ಕಾಶಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಕೆಲವರು ತಮ್ಮ ಶಿಷ್ಯರನ್ನಾಗಿ
ಪಡೆದು ಅವರಿಗೆ ವೇದಾಂತದ ಪಾಠವನ್ನು ಹೇಳಿಕೊಟ್ಟರು.ಶ್ರೀಶಂಕರಾಚಾರ್ಯರು ಅದ್ವೈತ ಸಿದ್ಧಾಂತದ ಪ್ರತಿಪಾದಕರು.ಇವರ ಸಿದ್ಧಾಂತದ ಪ್ರಕಾರ
ಆತ್ಮ ಮತ್ತು ಪರಮಾತ್ಮ ಎಂಬುದು ಎರಡು ಬೇರೆಬೇರೆ ಅಂಶಗಳಲ್ಲ.ಇರುವುದು ಒಂದೇ.ಆತ್ಮನೇ
ಪರಮಾತ್ಮನು,ಪರಮಾತ್ಮನೇ ಆತ್ಮನು.
ದೇಶದ ಮೂಲೆಮೂಲೆಗಳಲ್ಲಿ ಸಂಚರಿಸಿದ ಶಂಕರರು
ಅನೇಕರನ್ನು ಆಧ್ಯಾತ್ಮಿಕ ವಿಚಾರದಮೇಲಿನ ವಾದದಲ್ಲಿ ಸೋಲಿಸಿದರು.ಮಂಡನಮಿಶ್ರರೆಂಬ ದೊಡ್ಡ ವಿದ್ವಾಂಸರನ್ನು ವೇದಾಂತ ಚರ್ಚೆಯಲ್ಲಿ ಸೋಲಿಸಿದ ಘಟನೆ ಬಹು ಮುಖ್ಯವಾದುದು.ಮುಂದೆ
ಮಂಡನ ಮಿಶ್ರರೇ ಶ್ರೀಸುರೇಶ್ವರಾಚಾರ್ಯ ಎಂಬ
ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕುಪೀಠಗಳನ್ನು ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ
ಶಿಷ್ಯರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಿದರು.ಹಲ
ವಾರು ಪಂಡಿತರನ್ನೂ,ಶಾಸ್ತ್ರವೇತ್ತರನ್ನೂ ಜಯಿಸಿ,ಸರ್ವಜ್ಞಪೀಠವನ್ನೇರಿದರು.
ಕಾಶ್ಮೀರದ ಪಂಡಿತರುಗಳನ್ನು ವಾದದಲ್ಲಿ ಜಯಿಸಿ,ಅವರು ಸೋಲೊಪ್ಪುವಂತೆ ಮಾಡಿದರು.
ಶ್ರೀಶಂಕರಾಚಾರ್ಯರು ಉತ್ತರದಲ್ಲಿ ಬದರೀಪೀಠ,
ದಕ್ಷಿಣದಲ್ಲಿ ಶೃಂಗೇರಿಪೀಠ,ಪೂರ್ವದಲ್ಲಿ ಪುರಿಪೀಠ ಮತ್ತು ಪಶ್ಚಿಮದಲ್ಲಿ ದ್ವಾರಕಾಪೀಠ.ಈ ನಾಲ್ಕು ಮಠಗಳೂ ಇಂದಿಗೂ ತಮ್ಮ ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಮಂದಿ ಅನುಯಾಯಿಗಳನ್ನು ಹೊಂದಿವೆ.ಶಂಕರರು
ಬಾದರಾಯಣರ ಬ್ರಹ್ಮಸೂತ್ರ(ವೇದಾಂತಸೂತ್ರ/ಶಾರೀರಿಕ ಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು.ಉಪನಿಷತ್ತುಗಳಿಗೆ ಮತ್ತು ಶ್ರೀ ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು.ಇವರು ರಚಿಸಿದ ಭಜಗೋವಿಂದಮ್ ಸ್ತೋತ್ರ ಪ್ರಸಿದ್ಧವಾಗಿದೆ.
ಹಲವಾರು ಇತರೆ ಸ್ತೋತ್ರಗಳನ್ನೂ ಶಂಕರ ಭಗವತ್ಪಾದರು ರಚಿಸಿದ್ದಾರೆ.ಕನಕಧಾರ ಸ್ತೋತ್ರ ಎನ್ನುವ ಶ್ರೇಷ್ಠವಾದ ಸ್ತೋತ್ರವನ್ನೂ ರಚಿಸಿದ್ದಾರೆ.
ಇಂತಹ ಮಹಿಮರಾದ ಶ್ರೀಶಂಕರಾಚಾರ್ಯರು ತಮ್ಮ
32ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.
ಶ್ರೀಶಂಕರಾಚಾರ್ಯರ ಜಯಂತಿಯ ದಿನವಾದ ವೈಶಾಖ ಶುಕ್ಲಪಕ್ಷದ ಪಂಚಮಿಯ ದಿನವಾದ ಇಂದು
ಗುರುಗಳನ್ನು ಭಕ್ತಿಯಿಂದ ಸ್ಮರಿಸಿ,ನಮ್ಮ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
Sri Shankaracharya ಶಂಕರ ನೆನಪೇ ಶುಭಕರ ಲೇ: ಎನ್.ಜಯಭೀಮ ಜೊಯಿಸ್.ಶಿವಮೊಗ್ಗ
Date: