Basavanna ಬಸವಣ್ಣ…ನಮ್ಮ ಆಧುನಿಕ ಸಮಾಜವು ಅಗತ್ಯ ತಿಳಿಯಬೇಕಾದ ಅನೂಹ್ಯ ಜ್ಞಾನ ನಿಧಿ. ಮುಖ್ಯವಾಗಿ ವರ್ತಮಾನದಲ್ಲಿ ನಮಗೆ ಸಾಮಾಜಿಕ ಸಮಸ್ಯೆಗಳೇ ರಾಷ್ಡ್ರಮಟ್ಟಕ್ಕೂ ಹಬ್ಬಿ ವೈಯಕ್ತಿಕ ಅಧಃಪತನವಾಗುವ ಸನ್ನಿವೇಶ ಬಂದೊದಗಿದೆ.
ಜಾತಿ,ಮತ, ಅಂತಸ್ತು ,ಅಹಂಕಾರ ,
ಅಪ್ರಮಾಣಿಕತೆ, ಹಿಂಸೆ, ಕಳವು. ಕೊಲೆ ಸುಲಿಗೆ, ಪರಸ್ಪರ ಅಸೂಯೆ ಈ ಎಲ್ಲವೂ ನಮ್ಮ ನಮ್ಮಲ್ಲಿ ಕಿತ್ತಾಡುವಂತೆ ಮಾಡಿವೆ.
“ಕಳಬೇಡ, ಕೊಲಬೇಡ
ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸ ಬೇಡ,ಇದಿರ ಹಳಿಯಲು ಬೇಡ”
ನಮ್ಮ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಗೆ ಅಂದೇ ಮಹಾನುಭಾವ ಬಸವಣ್ಣ ಆದರ್ಶಗಳನ್ನ ನೀಡಿದರು.
ನಾವೀಗ ಏನಾಗಿದ್ದೇವೆ? ಎಂಬ ಆತ್ಮಸಾಕ್ಷಿಗೇ ಪ್ರಶ್ನೆ ಹಾಕಿಕೊಳ್ಳಬೇಕಿದೆ. ಹಿರಿಯರು ಇವನ್ನೇ ಪಂಚಶೀಲಗಳೆಂದು ಕರೆದರು.
೧ ಕಳಬೇಡ
ಅನ್ಯರ ಸಂಪತ್ತನ್ನ ಕದಿಯದಿರು.
ನೀನೇ ಸ್ವತಃ ದುಡಿದು ,ಬೆವರು ಸುರಿಸಿ ಊಟಮಾಡು.
೨ ಕೊಲಬೇಡ
ಕೊಲ್ಲಬೇಡ.ಅಂದರೆ ಹಿಂಸೆ ಮಾಡಬೇಡ. ಕೊಲ್ಲುವ ಕ್ರಿಯೆ ಕೇವಲ ರಕ್ತಪಾತವೊಂದೇ ಅಲ್ಲ
ಮಾನಸಿಕ ಹಿಂಸೆಯೂ ಅದಕ್ಕೆ ಸಮಾನ. ಯಾರನ್ನೂ ಮನುಷ್ಯ ಮತ್ತು ಪ್ರಾಣಿಗಳ ಸಹಿತ ಹಿಂಸಿಸಬೇಡ.
೩ ಹುಸಿಯ ನುಡಿಯಲು ಬೇಡ
ನಮ್ಮ ಜೀವನದಲ್ಲಿ ಮಾಡುವ ಘೋರ ಪಾಪಗಳಲ್ಲಿ ಇದು ಮೊದಲು. ಸ್ವಾರ್ಥಕ್ಕಾಗಿ ಸುಳ್ಳು ಹೇಳಿ ನಮ್ಮ ಹಿತ ಸಾಧಿಸಿಕೊಳ್ಳುತ್ತೇವೆ. ಒಟ್ಟು ಸುಳ್ಳು ಹೇಳಿದರೆ ಜನ ನಂಬುತ್ತಾರೆ. ಆ ನಂಬಿಕೆಯ ಮೇಲೇ ನಮ್ಮ ಬದುಕು ಸಾಗಿಸಿದರೆ ಆಯಿತು ಎಂಬ ಕೆಟ್ಟ
ಆಲೋಚನೆ ಬಿಡಿ. ಹೇಳುವ ಸುಳ್ಳು ಒಂದಲ್ಲ ಒಂದು ದಿನ ನಮಗೆ ಘಾಸಿಗೊಳಿಸುತ್ತದೆ.
೪ ತನ್ನ ಬಣ್ಣಿಸ ಬೇಡ
ನಿನ್ನನ್ನೇ ನೀನು ಹೊಗಳಿಕೊಂಡರೆ ಸಮಾಜ ನಿನ್ನ ಬಗ್ಗೆ ತಾತ್ಸಾರ ತಾಳುತ್ತದೆ. ಯಾವ ಮಹಾ ಮನುಷ್ಯ ಈತ. ಮನುಷ್ಯನಾಗಿ ಜನಿಸಿ ಒಂದೆರಡು ಉಪಕಾರ ಮಾಡಿದಾಕ್ಷಣ ಅದನ್ನ ಬಣ್ಣಿಸಿ ಹೇಳುವುದೂ ನಮಗೆ ತರವಲ್ಲ.
ಉಪಕಾರ, ಕೊಡುಗೆ,ಅನುಕಂಪ ಮಾನವ ಜನ್ಮಕ್ಕೆ ಸಹಜವಾಗಿವೆ. ಅಂತಹ ಸಾಮಾನ್ಯತೆಯ ಕೆಲಸ ಮಾಡಿದೆ ಅಷ್ಟೆ.
೫ ಇದಿರ ಹಳಿಯಲು ಬೇಡ
Basavanna ಬೇರೆಯವರನ್ನ ದೂಷಿಸಬೇಡ.
ಹಾಗೆ ಮಾಡಿದರೆ ನಿನ್ನನ್ನ ಜನ ನಂಬುವುದೇ ಇಲ್ಲ. ಯಾಕೆಂದರೆ
ಇವತ್ತು ಬೇರೆಯವರ ಬಗ್ಗೆ ದೂಷಣೆ. ನಾಳೆ ಇನ್ನೊಬ್ಬರೆದುರು ತಮ್ಮನ್ನೇ ದೂಷಿಸುತ್ತಾನೆ ಎಂದು ಬೆಲೆಯೇ ಕೊಡುವುದಿಲ್ಲ. ಇದೂ ಕೂಡ ಸಲ್ಲದು.
ಈ ಐದು ಮುತ್ತುಗಳು ನಮ್ಮ ಮನಸ್ಸಿನಲ್ಲಿ ಧರಿಸಿದರೆ ನಮ್ಮ ಬಾಳು ಬಂಗಾರ.ಸಮಾಜವೂ ಸುಖಿ. ದೇಶವೂ ಸುಭಿಕ್ಷ.
ಬಸವ ಜಯಂತಿಯಂದು ನಾವೆಲ್ಲರೂ ಈ ಪಂಚಶೀಲಗಳನ್ನ ಪಾಲಿಸುತ್ತೇವೆಂದು ಪಣತೊಡೋಣ.
ಲೇ; ಡಾ.ಸುಧೀಂದ್ರ