Kuvempu University ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ದಲಿತರ ನಾಯಕ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೂ ಸಲ್ಲುವ ರಾಷ್ಟ್ರನಾಯಕ. ಸರ್ವರ ಸರ್ವತೋಮುಖ ಅಭಿವೃದ್ಧಿಯ ಮೂಲಕ ಸಮಸಮಾಜ ನಿರ್ಮಾಣವಾಗಬೇಕೆಂಬ ಕನಸ್ಸು ಕಂಡವರು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಸಿ. ಗೀತಾ ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರವು ಶುಕ್ರವಾರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಅನುಕರಣೀಯ. ಸಂಕೀರ್ಣವಾದ ಸಮಕಾಲೀನ ಕಾಲಘಟ್ಟದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳು ಸರ್ವರ ಸಾಮರಸ್ಯದ ಬದುಕಿಗೆ ಪ್ರೇರಕ ಶಕ್ತಿ ಎಂದರು.
Kuvempu University ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಆನ್ ಲೈನ್ ಸಂದೇಶ ನೀಡಿ, ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಕಾರ್ಯಕ್ರಮವನ್ನು ಆಚರಿಸಲಾಗಿದ್ದು, ಚುನಾವಣೆಯ ನಂತರ ವಿಶ್ವವಿದ್ಯಾಲಯದ ವತಿಯಿಂದ “ಸಾಮರಸ್ಯ ಭಾರತ: ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳು” ಎಂಬ ಕೃತಿಯನ್ನು ಪ್ರಕಟಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದರು.
ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನದ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಯಾದವ್ ಬೋಡ್ಕೆ, ಪ್ರೊ.ಎಂ.ಬಿ. ತಿಪ್ಪೇಸ್ವಾಮಿ ಡಾ.ಶ್ರೀಶೈಲ, ಡಾ.ದೇವಿದಾಸ, ಡಾ.ಗೋವಿಂದರಾಜ್, ಡಾ. ಅಣ್ಣಯ್ಯ, ಬಸಪ್ಪಭೋವಿ, ಧನಸಿಂಗ್ ನಾಯ್ಕ, ಶಿವಯೋಗಿ ಜೋಗನ್, ಶ್ರೀನಿವಾಸ್ ಮೂರ್ತಿ, ಶೇಖರ್ ಆರ್. ಸಂಪತ್ ಕುಮಾರ್, ಮಂಜುನಾಥಯ್ಯ ಮೊದಲಾದ ಸಂಶೋಧನಾರ್ಥಿಗಳು, ಅಧ್ಯಾಪಕೇತರ ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.