Red Cross Shimoga ಪ್ರತಿಯೊಬ್ಬರು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಜಾಗೃತಿ ಹೊಂದುವ ಜತೆಯಲ್ಲಿ ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು. ಏನಾದರೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಎಸ್.ದಿನೇಶ್ ಹೇಳಿದರು.
ಶಿವಮೊಗ್ಗ ನಗರದ ರೆಡ್‌ಕ್ರಾಸ್ ಕಚೇರಿ ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ 10 ಜನ ಕ್ಷಯ ರೋಗಿಗಳಿಗೆ ಅಗತ್ಯ ಪೌಷ್ಠಿಕಾಂಶದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ಟಿಬಿ ನಿರ್ಮೂಲನಾ ಗುರಿಯಿಂದ ರಾಜ್ಯದ ಎಲ್ಲ ರೆಡ್‌ಕ್ರಾಸ್ ಶಾಖೆಗಳಲ್ಲಿ ಪ್ರತಿ ತಿಂಗಳು ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶದ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ದಿನೇಶ್ ಮಾತನಾಡಿ, ಕ್ಷಯ ರೋಗಕ್ಕೆ ಭಯ ಪಡುವುದು ಬೇಡ, ಸಕಾಲದಲ್ಲಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕ್ಷಯ ರೋಗ ಗುಣಪಡಿಸಬಹುದು. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಪರೀಕ್ಷೆ ಹಾಗೂ ಉಚಿತ ಔಷಧೋಪಚಾರ, ಟಿಬಿ ರೋಗಿಗಳಿಗೆ ಧನ ಸಹಾಯ ನೀಡಲಾಗುತ್ತದೆ ಎಂದು ಹೇಳಿದರು.
Red Cross Shimoga ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರು ಮಾತನಾಡಿ, ತೂಕ ಕಡಿಮೆ ಆಗುವುದು, ಪದೇ ಪದೇ ಜ್ವರ ಬರುವುದು ಕ್ಷಯ ರೋಗದ ಮುಖ್ಯ ಗುಣ ಲಕ್ಷಣಗಳು. ಕಫ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಟಿ.ಬಿ. ಮುಕ್ತರಾಗಬಹುದು. ಎಲ್ಲರ ಸಹಕಾರದಿಂದ ಟಿಬಿ ಮುಕ್ತ ಭಾರತ ನಿರ್ಮಾಣ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕರಾದ ಗಿರೀಶ್, ನವೀನ್, ಧರಣೇಂದ್ರ ದಿನಕರ್, ಜಿ.ವಿಜಯ್‌ಕುಮಾರ್, ರೆಡ್‌ಕ್ರಾಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.