AIT College Chikmagalur ಮಲೆನಾಡು ಪ್ರದೇಶಗಳಾದ ಕಾಫಿ ಹಾಗೂ ಅಡಿಕೆ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದ್ದಲ್ಲಿ ಸುಮಾರು ಒಂದರಿಂದ ಎರಡು ಲಕ್ಷ ಟನ್‌ಗಳಷ್ಟು ಬೆಳೆಗಳ ಇಳುವರಿ ಉತ್ಪಾದಿಸಬಹುದು ಎಂದು ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ|| ವೇಣುಗೋಪಾಲ್ ಹೇಳಿದರು.
ಚಿಕ್ಕಮಗಳೂರಿನ ಎಐಟಿ ಕಾಲೇಜು ಆವರಣದಲ್ಲಿ ಕೃಷಿಕ ಪತ್ರಿಕೆ ಸಹಯೋಗದಲ್ಲಿ ನಡೆದ ಲೇಖಕ ಅಚ್ಚನಹಳ್ಳಿ ಸುಚೇತನ ರಚಿಸಿರುವ ‘ಕಾಳುಮೆಣಸಿನ ಕರ್ಮಯೋಗಿ ಡಾ.ವೇಣುಗೋಪಾಲ್’ ಕೃತಿ ಲೋಕಾರ್ಪಣೆ ಹಾಗೂ ಕಾಳುಮೆಣಸಿನ ಕೃಷಿ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅತಿಹೆಚ್ಚು ಹಾಗೂ ಸಾಧಾರಣೆ ಮಳೆಯಾಗುವ ಪ್ರದೇಶಗಳಲ್ಲಿ ಕಾಳುಮೆಣಸಿನ ಬೆಳೆಗಳ ನಿರ್ವಹಣೆಯಲ್ಲಿ ರೈತಾಪಿ ವರ್ಗವು ಕೆಲವು ನಿಯಮಗಳನ್ನು ಪಾಲಿಸಿಕೊಂಡಲ್ಲಿ ಉತ್ತಮ ಇಳುವಳಿ ಪಡೆದು ಆರ್ಥಿಕವಾಗಿ ಸದೃಢ ರಾಗಬಹುದು. ಆ ನಿಟ್ಟಿನಲ್ಲಿ ಕೃಷಿಕ ಪತ್ರಿಕೆ ಅತ್ಯಂತ ಹೆಚ್ಚು ಸಹಕಾರ ನೀಡಿ ರೈತರಿಗೆ ಉತ್ತಮ ಮಾಹಿತಿಯನ್ನು ರವಾನಿಸುತ್ತಿರುವುದು ಸಂತೋಷದಾಯಕ ಎಂದರು.
AIT College Chikmagalur ಕಾಳುಮೆಣಸಿನ ರೋಗಗಳನ್ನು ನಿರ್ದಿಷ್ಟ ಸಮಯದಲ್ಲಿ ಅಗತ್ಯ ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿರ್ವಹಿಸಬಹುದು. ಬಳ್ಳಿ ಮತ್ತು ಬೆಳೆ ನಷ್ಟಕ್ಕೆ ಈ ರೋಗಗಳು ಪ್ರಮುಖ ಸಮಸ್ಯೆಯಾಗಿರುವುದರಿಂದ ರೋಗ ನಿರ್ವಹಣೆಗೆ ಕೃಷಿ-ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಳು ಮೆಣಸನ್ನು ಎರಡೂ ವಿಧಾನಗಳಲ್ಲಿಯೂ ಬೆಳೆಯಬಹುದು. ಕಾಫಿ ಇದ್ದಲ್ಲಿಯೂ ಕಾಳುಮೆಣಸು ಬೆಳೆಯಲಾಗುತ್ತಿದೆ. ಇದರಲ್ಲಿ ಕಾಫಿ ಗಿಡದ ಎತ್ತರ 5 ಅಡಿ, ಆ ಎತ್ತರ ಹೊರತುಪಡಿಸಿ ಅದಕ್ಕೂ ಎತ್ತರದಲ್ಲಿ ಮೆಣಸು ಸೊಗಸಾಗಿ ಬೆಳೆಯುತ್ತದೆ. ಬಳ್ಳಿಗಳ ಸಂಖ್ಯೆ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ರೋಬಸ್ಟಾ ತೋಟವಾದರೆ 150 ಬಳ್ಳಿಗಳು, ಅರೇಬಿಕಾ ತೋಟವಾದರೆ 350 ಬಳ್ಳಿಗಲಾದರು ಇರಬೇಕು ಎಂದು ವಿವರಿಸಿದರು.
ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಕರ್ಮಯೋಗಿ ಡಾ.ವೇಣುಗೋಪಾಲ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ ವೇಣುಗೋಪಾಲ್ ಅವರು ಸತತವಾಗಿ 48 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರ ದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯ ವಿಚಾರವಲ್ಲ. ಅದೆಷ್ಟೋ ರೈತರ ಸಮಸ್ಯೆಗಳನ್ನು ಅವರವರ ಊರು ಗಳಿಗೆ ತೆರಳಿ ಬಗೆಹರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯದಲ್ಲಿ ಸುಮಾರು 5-6 ಜಿಲ್ಲೆಗಳಲ್ಲಿ ಕಾಳುಮೆಣಸಿನ ಬೆಳೆಗಳು ಹೆಚ್ಚಾಗಿರುವ ಪ್ರದೇಶಗಳ ಜನಸಾಮಾನ್ಯ ರೊಂದಿಗೆ ಉತ್ತಮ ಒಡನಾಟವನ್ನು ವೇಣುಗೋಪಾಲ್ ಅವರು ಹೊಂದಿದ್ದಾರೆ. ಬೆಳೆಗಳ ಸಂಶೋಧನೆಯಲ್ಲಿ ರೈತರನ್ನು ಭಾಗಿಯಾಗಿ ಮಾಡಿಕೊಂಡು ಆರ್ಥಿಕವಾಗಿ ರೈತರನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿಕ ಪತ್ರಿಕೆ ಪ್ರಧಾನ ಸಂಪಾದಕ ಎಂ.ಜೆ.ದಿನೇಶ್ ಕಾಳುಮೆಣಸು ಸೇರಿದಂತೆ ಇತರೆ ಬೆಳೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಪ್ರಪಂಚದ ವಿವಿಧ ದೇಶಗಳಿಗೆ ಭೇಟಿ ನೀಡಿ ಯಾವು ದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೇ ಅದ್ಬುತ ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರೈತರಿಗೆ ಬೆಳೆಗಳ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
ಇದರೊಂದಿಗೆ ಇ-ಕೃಷಿಕ್ ಆ್ಯಪ್ ಬಿಡುಗಡೆ ಮಾಡಲಾಗಿದ್ದು ಇದರಲ್ಲಿ ಮಲೆನಾಡು ಪ್ರದೇಶಗಳ ಬೆಳೆಗಳ ವಿವರ ಹಾಗೂ ಕಾರ್ಮಿಕರ ಮಾಹಿತಿಗಳನ್ನು ಒಳಗೊಂಡಿದೆ. ಈ ಆ್ಯಪ್‌ಅನ್ನು ದೇಶದ ಕೃಷಿ ಕ್ಷೇತ್ರದ ಏಳರಲ್ಲಿ ಒಂದಾಗಿ ಕೇಂದ್ರ ಸರ್ಕಾರ ಗುರುತಿಸಿದೆ ಎಂದು ತಿಳಿಸಿದರು.
ಇದೇ ವೇಳೆ ಬೆಳೆಗಾರರಿಗೆ ಕಾಳುಮೆಣಸಿನ ಕೃಷಿ ಪ್ಯಾಕೇಜ್ ಆಫ್ ಪ್ರಾಕ್ಟೀಸ್ ಕಾರ್ಯಾಗಾರವನ್ನು ಡಾ.ವೇಣುಗೋಪಾಲ್ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಟಿ ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ ವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ|| ಎಸ್.ಜೆ.ಅಂಕೇಗೌಡ, ಲೇಖಕ ಅಚ್ಚನಹಳ್ಳಿ ಸುಚೇತನ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಶಿಕ್ಷಣ ನಿರ್ದೇಶಕ ಡಾ|| ಬಿ.ಹೇಮ್ಲಾ ನಾಯ್ಕ್, ಪ್ರಗತಿಪರ ಕೃಷಿಕರಾದ ಕೇಶವ ಕೆಂಜಿಗೆ, ಡಾ.ವಿವೇಕ್, ಸೀತಾರಾಂ ಹೆಗಡೆ, ನೂಮನ್ ಆದಿಲ್, ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಡಿಎಸ್‌ಎಂಎಸ್ ಉಪಾಧ್ಯಕ್ಷ ಅಶೋಕ್‌ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.