ಮರಳಿ ಮತದಾರನಾಗು ಮಾನವ ಮರಳಿ ಮತದಾರನಾಗು…..!
Voters Awareness ಎಲ್ಲೆಲ್ಲಿಯೂ ಬಿಸಿ ಬಿಸಿ ಎಲೆಕ್ಷನ್ ದೇ ಚರ್ಚೆ, ಯಾವ ಪಕ್ಷ ಗೆಲ್ಲಬಹುದು ? ಯಾರ್ಯಾರಿಗೆ ಮತದಾರ ಕೈ ಹಿಡಿಯುತ್ತಾನೆ ? ಪ್ರಜಾ ಪ್ರಭು ಯಾರನ್ನು ಮೇಲಕ್ಕೆತ್ತುತ್ತಾನೆ ? ಯಾರನ್ನು ಕೆಳಗೆ ತಳ್ಳುತ್ತಾನೆ ? ಯಾರನ್ನು ತೇಲಿಸುತ್ತಾನೆ ? ಯಾರನ್ನು ಮುಳುಗಿಸುತ್ತಾನೆ ? ಉಫ್, ಅಯ್ಯೋ ದೇವ್ರೇ ಎಂತೆಂತ ಲೈನ್ಗಳು ಪ್ರಜೆ, ಪ್ರಜೆ, ಪ್ರಭು, ಮತದಾರ ಅಂತ ಇನ್ನೂ ಒಂದುವರೆ ತಿಂಗಳು ಉಜ್ಜುವುದೇ ಕೆಲಸ, ಇವನ್ನೆಲ್ಲ ಎಷ್ಟೊ ವರ್ಷಗಳಿಂದ ನೋಡಿ ನೋಡಿ ಸಾಕಾಗಿರುವ ನಮ್ಮ ಸತ್ ಪ್ರಜೆಗಳಲ್ಲಿ ಕೆಲವರು ಮತದಾನ ಮಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ, ಕೆಲವರಂತೂ EVM ನ ಕೊನೆಯ ಬಟನ್ ಆದ NOTA (None of the above) ಅನ್ನು ಒತ್ತಿ ಕೈ ತೊಳೆದುಕೊಳ್ಳುತ್ತಾರೆ, ಅವರ ಮನಸ್ಸಿನಲ್ಲಿರೋದು ಅದೇ “ಸ್ವಾಮಿ ! ನಮಗೆ ಯಾವ ಪಕ್ಷವೂ ಬೇಡ, ಯಾವ ರಾಜಕಾರಣವೂ ಬೇಡ, ನಾವು ಯಾರಿಗೂ ಮತ ಹಾಕುವುದೂ ಬೇಡ, ನಮ್ಮಿಂದ ಯಾರೂ ಗೆಲ್ಲುವುದೂ ಬೇಡ, ಸೋಲುವುದೂ ಬೇಡ” ಎಂದು, ಮತದಾನಕ್ಕಾಗಿ ಕೊಡುವ ರಜವನ್ನು ಮನೆಯಲ್ಲಿ ಕುಳಿತು ಆರಾಮು ಮಾಡಲು ಕೆಲವರು ಬಳಸಿಕೊಳ್ಳುತ್ತಾರೆ,
Voters Awareness ಸ್ನೇಹಿತರೆ ನಾವು ಈ ರೀತಿಯ ನಿರಾಶಾವಾದಿತನದ ಆಲೋಚನೆಗಳನ್ನು ಮಾಡುವುದರಿಂದ, ಮತ ಹಾಕದೆ ಕೈಕಟ್ಟಿ ಕೂರುವುದರಿಂದ, NOTA ಒತ್ತುವುದರಿಂದ ಯಾವ ಪ್ರಯೋಜನವು ಇಲ್ಲ, ನಮಗೆ ಬೇಕಾಗಿರುವುದು ಯಾವುದೋ ರಾಜನಲ್ಲ, ನಮಗೆ ಕೆಲಸ ಮಾಡಿಕೊಡಬಲ್ಲಂತಹ ಸೇವಕ, ನಮಗೆ ಬೇಕಾಗಿರುವುದು ಯಾವುದೋ ಅಧಿಕಾರಿಯಲ್ಲ, ನಾವು ಕೊಡುವ ಸಂಬಳಕ್ಕಾಗಿ ದುಡಿಯುವ ಕಾರ್ಮಿಕ, ಪ್ರಜೆಗಳ ತೆರಿಗೆ ಹಣ ನಮ್ಮ ಪ್ರಜಾಪ್ರತಿನಿಧಿಗಳ ಸಂಬಳ, ಇವನ್ನೆಲ್ಲ ನಮ್ಮ 8 ನೇ ಕ್ಲಾಸಿಂದ ನಾವು ಓದುತ್ತಾ ಬಂದಿದ್ದರೂ ಸಹ ಪ್ರಜೆಗಳು ಕೊನೆಗೆ 5 ವರ್ಷಕ್ಕೊಮ್ಮೆ ತಮ್ಮ ಜುಟ್ಟು ಕೊಡುವುದು ರಾಜಕಾರಣಿಗಳ ಕೈಯಲ್ಲೇ, ಆದರೆ ಕೆಲವರು ಅಂದುಕೊಳ್ಳುವುದು ಏನೆಂದರೆ “ನಾನು ಮತದಾನ ಮಾಡಿಲ್ಲವೆಂದರೆ ಸೇಫ್, ನನ್ನ ಜುಟ್ಟು ಯಾವ ರಾಜಕಾರಣಿಯ ಕೈಯಲ್ಲೂ ಇಲ್ಲಾ” ಎಂದು, ಸ್ನೇಹಿತರೆ ಇದೊಂದು ದೊಡ್ಡ ತಪ್ಪು ಕಲ್ಪನೆ, ನಾವು ಚಲಾಯಿಸದ ಮತ ವ್ಯರ್ಥವಾಗಿ ಹೋಗುತ್ತದೆ, ಅದನ್ನೇ ಸರಿಯಾಗಿ ಯೋಚಿಸಿ ಈ ಪಕ್ಷ – ಆ ಪಕ್ಷ – ನನ್ನ ಧರ್ಮ – ನಿನ್ನ ಧರ್ಮ – ನನ್ನ ಜಾತಿಯ ಪ್ರತಿನಿಧಿ – ನಿನ್ನ ಜಾತಿಯ ಪ್ರತಿನಿಧಿ – ಇವ್ನು ನಂಗೆ ದುಡ್ಡು ಕೊಟ್ಟಿದ್ದಾನೆ ಅಂತೆಲ್ಲ ಯೋಚನೆ ಮಾಡದೆ ಸರಿಯಾಗಿ ನಾವು ಕಟ್ಟಿದ ತೆರಿಗೆ ಹಣದಿಂದ ಈ ಮನುಷ್ಯ ನಮಗೆ ಅನುಕೂಲ ಮಾಡಿಕೊಡುತ್ತಾನೆಯೇ ಅಥವಾ ನಮ್ಮ ಹಣವನ್ನೆಲ್ಲಾ ಭ್ರಷ್ಟಾಚಾರದ ಮೂಲಕ ನುಂಗಿ ನೀರು ಕುಡಿಯುತ್ತಾನೆಯೇ ಎಂದು ಯೋಚಿಸಿ ಪಕ್ಷ – ಜಾತಿ – ಮತ – ಧರ್ಮ – ದುಡ್ಡು ಇವನ್ನೆಲ್ಲ ಯಾವುದನ್ನೂ ಲೆಕ್ಕಿಸದೆ ನಮಗೆ ಸರಿಯಾಗಿ ಕೆಲಸ ಮಾಡಿಕೊಡಬಲ್ಲಂತಹ ವ್ಯಕ್ತಿ ಯಾರೆಂದು ಗೊತ್ತು ಮಾಡಿಕೊಂಡು ಮತ ಚಲಾಯಿಸೋಣಾ, ಅವನು ಯಾವುದೇ ಪಕ್ಷಕ್ಕಾದರೂ ಸೇರಿರಲಿ ಅಥವಾ ಯಾವುದೇ ಪಕ್ಷಕ್ಕೆ ಸೇರದ ಪಕ್ಷೇತರ ಅಭ್ಯರ್ಥಿ, ಸ್ವತಂತ್ರ ಅಭ್ಯರ್ಥಿಯಾದರು ಆಗಿರಲಿ ಮತ ಚಲಾಯಿಸೋಣ,.
ಏಕೆಂದರೆ ಒಬ್ಬ ಯೋಗ್ಯ ಪ್ರಜಾ ಕಾರ್ಮಿಕನಿಗೆ ಮತ ಚಲಾಯಿಸಿ ಅವನು ಸೋತರೂ ಆ ಮತ ವ್ಯರ್ಥವಾಗುವುದಿಲ್ಲ, ಆದರೆ ಮತವನ್ನೇ ಚಲಾಯಿಸದಿದ್ದರೆ ಮತ ಖಂಡಿತವಾಗಿ ವ್ಯರ್ಥವಾಗುತ್ತದೆ, ಯೋಗ್ಯರಿಗೆ ಮತದಾನ ಮಾಡುವುದು ನಮ್ಮ ಹಕ್ಕು, ವಿಶೇಷವಾಗಿ ಪ್ರಜಾ ಕಾರ್ಮಿಕರಿಗೆ ಮತದಾನ ಮಾಡುವುದು ನಮ್ಮ ಕರ್ತವ್ಯ,
ಹಾಗಾದ್ರೆ ಈ ಬಾರಿ ಶಿವಮೊಗ್ಗದಲ್ಲಿ ಶೇಕಡಾ 100 ಕ್ಕೆ 100 ರಷ್ಟು ಮತದಾನ ಆಗ್ಲೇಬೇಕು, ಕೊನೆದಾಗಿ ಬೇಸತ್ತ, ಮತದಾನ ಮಾಡದೆ ಕೈಕಟ್ಟಿ ಕುಳಿತ, ಪ್ರಜಾಪ್ರಭುತ್ವವನ್ನೇ ದೂಷಿಸುತ್ತಿರುವ ನಮ್ಮ ಪ್ರಜೆಗಳೇ ಬದಲಾವಣೆ ಎನ್ನುವುದು ನಿಮ್ಮಿಂದಲೇ ಸಾಧ್ಯ, ನೀವು ನಿಮ್ಮ ಮನಸ್ಸನ್ನು ಬದಲಿಸಿ ಮತದಾನ ಮಾಡಿದರೆ ನಿಮ್ಮ ಕುಟುಂಬ ಬದಲಾಗುತ್ತದೆ, ನಿಮ್ಮ ಕುಟುಂಬದಿಂದ ನಿಮ್ಮ ಅಕ್ಕ – ಪಕ್ಕದ ಜನ ಬದಲಾಗುತ್ತಾರೆ, ನಂತರ ನಿಮ್ಮ ಕಾಲೋನಿಯ ಜನ ಬದಲಾಗುತ್ತಾರೆ, ಅದರಿಂದ ಗ್ರಾಮ, ಗ್ರಾಮದಿಂದ ತಾಲೂಕು, ಅಲ್ಲಿಂದ ಜಿಲ್ಲೆ, ನಂತರ ರಾಜ್ಯ, ಮುಂದೆ ಸಂಪೂರ್ಣ ದೇಶವೇ ಬದಲಾಗುತ್ತದೆ ಇಷ್ಟು ಬದಲಾವಣೆ ಆಗುವುದರ ಮೂಲ ಒಬ್ಬ ಬದಲಾಗುವುದರಿಂದ ಮಾತ್ರ ಸಾಧ್ಯ, ಈ ಒಬ್ಬನಿಂದ ಪ್ರತಿಯೊಬ್ಬರೂ ಬದಲಾಗುತ್ತಾರೆ, ಆ ಮೊಟ್ಟಮೊದಲ ಒಬ್ಬ ನೀನಾಗ್ತೀಯಾ ಮತದಾರ ?? ಮರಳಿ ಮತದಾರನಾಗು ಮಾನವ ಮರಳಿ ಮತದಾರನಾಗು…..!
ನಾಗೇಂದ್ರ, ಟಿ, ಆರ್
ದ್ವಿತೀಯ ವರ್ಷದ ಬಿ ಎಸ್ ಡಬ್ಲ್ಯೂ ವಿದ್ಯಾರ್ಥಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ