Babu Jagjivanaram ಸಾಮಾಜಿಕ ನ್ಯಾಯ, ಸಮ ಸಮಾಜ ನಿರ್ಮಾಣ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ದಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಲ್ಲಿ ಡಾ.ಜಗಜೀವನರಾಮ್‍ರವರು ಒಬ್ಬರಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಷಯ ಉಪನ್ಯಾಸಕರಾದ ರಾಜು ಹೇಳಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಮ್ ರವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
Babu Jagjivanaram ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಡಾ.ಜಗಜೀವನರಾಮ್‍ರವರ ಪಾತ್ರ ಪ್ರಮುಖವಾಗಿದ್ದು ಇವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಗಾಂಧೀಜಿಯವರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದರು ಸ್ಮರಿಸಿದರು.
1908 ರ ಏಪ್ರಿಲ್ 1 ರಂದು ಬಿಹಾರದ ಭೋಜಪುರ ಜಿಲ್ಲೆಯ ಚಾಂದ್ವದಲ್ಲಿ ಜನಿಸಿದರು. ಸಮಾಜದಲ್ಲಿನ ಮೇಲು ಕೀಳು ಭಾವನೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರಲು ಹೋರಾಡಿದರು. ಅಸ್ಪೃಶ್ಯತೆ ಸಾಮಾಜಿಕ ಅಂತರವನ್ನು ಹೋಗಲಾಡಿಸಲು ಶ್ರಮಿಸಿದ ಇವರು ಸಂವಿಧಾನ ರಚನೆಯಲ್ಲಿ ಕೂಡ ಮುಖ್ಯ ಪಾತ್ರ ವಹಿಸಿದ್ದಾರೆ.
ಕಾರ್ಮಿಕ ಸಚಿವರಾಗಿ, ರಕ್ಷಣಾ ಮಂತ್ರಿ, ಉಪ ಪ್ರಧಾನಿಯಾಗಿ ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು 1986 ಜುಲೈ 6 ರಂದು ದೈವಾಧೀನರಾಗುತ್ತಾರೆಂದು ತಿಳಿಸಿದ ಅವರು ಸ್ವಾತಂತ್ರ್ಯ ಹಾಗೂ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಇಂತಹ ಮಹಾನ್ ಪುರಷರನ್ನು ನಾವು ಕೇವಲ ಅವರ ಜಯಂತಿ ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಸ್ಮರಿಸದೆ, ಎಂದಿಗೂ ನೆನಪಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಪರಿಶ್ರಮ ಮತ್ತು ಸಾಮಾಜಿಕ ಕಳಕಳಿಯಿಂದ ನಾವು ಯಾವ ದೊಡ್ಡ ಮಟ್ಟಕ್ಕಾದರೂ ಏರಬಹುದೆಂಬುದಕ್ಕೆ ಡಾ.ಬಾಬು ಜಗಜೀನರಾಮ್‍ರವರೇ ಉದಾಹರಣೆಯಾಗಿದ್ದು ಇವರು ಸಮಾಜ ಸುಧಾರಣೆಯ ಓರ್ವ ಆದರ್ಶ ಪುರುಷ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿ.ಪಂ ಸಿಇಓ ಸ್ನೇಹಲ್ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಲ್ಜೀತ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು, ಇಲಾಖಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.