Summer Camps In Shivamogga ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರೀ ಹೇಳಿದರು.
ಶಿವಮೊಗ್ಗ ನಗರದ ಸ್ಕೌಟ್ ಭವನದಲ್ಲಿ ನಗರ ಮತ್ತು ವಿವಿಧ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಥಳೀಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶಿಬಿರದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಸಮಯದ ಸದುಪಯೋಗ ಆಗಲಿದೆ. ಹೊಸ ಹೊಸ ವಿಷಯಗಳ ಕಲಿಕೆಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ನೃತ್ಯ, ಹಾಡು, ರಸ್ತೆ ಸುರಕ್ಷತೆ ಜಾಗೃತಿ, ಪ್ರಥಮ ಚಿಕಿತ್ಸೆ ಅರಿವು, ಚಾರಣ, ಪರಸ್ಪರ ಓಡನಾಟ, ಪರಿಚಯ, ಭಾಷಣ ಕಲೆ, ಚಿತ್ರಕಲೆ, ವ್ಯಕ್ತಿತ್ವ ವಿಕಸನ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ತಿಳವಳಿಕೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.
Summer Camps In Shivamogga ಜಿಲ್ಲಾ ಕಾರ್ಯದರ್ಶಿ ಎಚ್.ಪರಮೇಶ್ವರ್ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳ ಜ್ಞಾನಾರ್ಜನೆಗೆ ನೆರವು ಆಗುತ್ತದೆ. ಒಂದು ವಾರಗಳ ಕಾಲ ಸ್ಥಳೀಯ ಸಂಸ್ಥೆಯು ಶಿಬಿರ ನಡೆಸುತ್ತಿದೆ. ಎಲ್ಲ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್‌ಕುಮಾರ್ ಮಾತನಾಡಿ, ಮಕ್ಕಳನ್ನು ಮೊಬೈಲ್, ಟಿವಿ ಹಾಗೂ ನಕರಾತ್ಮಕ ಆಲೋಚನೆಗಳಿಂದ ದೂರವಿಡಲು ಬೇಸಿಗೆ ಶಿಬಿರಗಳು ಸಹಕಾರಿ ಆಗುತ್ತವೆ ಎಂದು ತಿಳಿಸಿದರು. ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಕ್ತರ್ ಹಾಗೂ ಶಶಿಕಲಾ ಅವರು ಪ್ರಥಮ ಚಿಕಿತ್ಸೆ ಕುರಿತು ಮಾತನಾಡಿದರು.
ಸ್ಥಳೀಯ ಸಂಸ್ಥೆ ಕಾಯದರ್ಶಿ ರಾಜೇಶ್ ಅವಲಕ್ಕಿ, ಬುಲ್ ಬುಲ್ ವಿಭಾಗದ ಮೀನಾಕ್ಷಮ್ಮ, ದೀಪು, ಮಲ್ಲಿಕಾರ್ಜುನ ಕಾನೂರು, ಪ್ರಿಯಾಂಕ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.