Sandalwood Sapling ಶ್ರೀಗಂಧ ಮರವು ಭಾರತೀಯ ಸಂಸ್ಕೃತಿಯಲ್ಲಿ ಪುರಾತನ ಇತಿಹಾಸ ಹಾಗೂ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಅನಾದಿ ಕಾಲದಿಂದಲೂ ಹಿರಿಯರು ಶ್ರೀಗಂಧ ವೃಕ್ಷವನ್ನು ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷ ಣಾಧಿಕಾರಿ ಸಿದ್ರಾಮಪ್ಪ ಹೇಳಿದರು.
ಅರಣ್ಯ ಇಲಾಖೆ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಆಶ್ರಯದಲ್ಲಿ ತಾಲ್ಲೂಕಿನ ಮತ್ತಾವರದ ಪ್ರಕೃತಿ ನಿರೂಪಣಾ ಕೇಂದ್ರದಲ್ಲಿ ಶ್ರೀಗಂಧ ವೈಜ್ಞಾನಿಕ ಬೇಸಾಯ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಹಿರಿಯರು ಮುಂದಿನ ಪೀಳಿಗೆಗೆ ಅನುಕೂಲಕ್ಕಾಗಿ ಶ್ರೀಗಂಧವೃಕ್ಷವನ್ನು ಬೆಳೆಸುವಲ್ಲಿ ಮುಂದಾಗಿದ್ದರು. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಶ್ರೀಗಂಧ ಮರವು ನಶಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಜಿಲ್ಲೆಯ ಅತಿಹೆಚ್ಚು ಪ್ರದೇಶಗಳಲ್ಲಿ ಶ್ರೀಗಂಧ ಸಸಿಗಳನ್ನು ಬೆಳೆಸಿ ಪೋಷಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Sandalwood Sapling ರೈತರು ಆರ್ಥಿಕವಾಗಿ ಸದೃಢರಾಗಲು ಶ್ರೀಗಂಧ ಬೆಳೆಸಲು ಮುಂದಾಗಬೇಕು. ಅರಣ್ಯ ಇಲಾಖೆಯಿಂದ ರೈತ ರಿಗಾಗಿ ಇಂತಿಷ್ಟು ಸಸಿಗಳ ಅವಶ್ಯಕತೆಯಿದೆ ಎಂದಾದರೆ ಸಸಿಗಳನ್ನು ಒದಗಿಸಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಸೂಕ್ತ ರೀತಿಯಲ್ಲಿ ಸಸಿಗಳ ನಿರ್ವಹಣೆಯನ್ನು ರೈತರು ಮಾಡಿದ್ದಲ್ಲಿ ಮಾತ್ರ ಪರಿಸರಕ್ಕೆ ಪೂರಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.
ಜಿಲ್ಲೆಯು ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಶ್ರೀಗಂಧ ಬೆಳೆಗಳಿಗೆ ಉತ್ತಮ ವಾತಾವರಣವಿದೆ. ಫಲವತ್ತತೆಯಿಂದ ಕೂಡಿರುವ ಮಣ್ಣಿನ ಸವಕಳಿಯನ್ನು ಒಳಗೊಂಡಿದೆ. ರೈತರು ಇಂತಹ ಭೂಮಿಯಲ್ಲಿ ಶ್ರೀಗಂಧ ಹಾಗೂ ಬಿದಿರಿನ ವಿವಿಧ ಜಾತಿಗಳ ಸಸಿಗಳನ್ನು ಪೋಷಿಸಿ ಬೆಳೆಸಿದರೆ ರಾಜ್ಯವು ಮತ್ತೊಮ್ಮೆ ಶ್ರೀಗಂಧದ ನಾಡೆಂದು ರೂಪುಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎ.ಎಸ್.ಈಶ್ವರಪ್ಪ ಪ್ರತಿಯೊಬ್ಬ ರೈತರು ತಮ್ಮ ಜಮೀನುಗಳಲ್ಲಿ ಯಥೆಚ್ಚವಾಗಿ ಶ್ರೀಗಂಧವನ್ನು ಬೆಳೆಯುವ ಮೂಲಕ ಆರ್ಥಿಕವಾಗಿ ನಿಲ್ಲಬೇಕೆಂಬ ನಿಟ್ಟಿನಲ್ಲಿ ಸಂಘವು ರಾಜ್ಯಾದ್ಯಂತ ಸಂಚರಿಸಿ ವಿಶೇಷ ಆಂದೋಲನವನ್ನು ಮಾಡಲಾಗುತ್ತಿದೆ ಎಂದರು.
ಶ್ರೀಗಂಧ ಬೆಳೆಗಳಿಗೆ ವಿವಿಧ ರಾಜ್ಯಗಳಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸರ್ಕಾರ, ಅರಣ್ಯ ಹಾಗೂ ರಕ್ಷಣಾ ಇಲಾಖೆಗಳು ರೈತರೊಂದಿಗೆ ನಿಕಟ ಸಂಪರ್ಕ ಹೊಂದಿದರೆ ರಾಜ್ಯ ಹಾಗೂ ದೇಶದಲ್ಲಿ ಶ್ರೀಗಂಧ ಸೂಕ್ತ ಬೆಳೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ನಾಡಿನ ರೈತರು ಪ್ರತಿ ಜಿಲ್ಲಾವಾರುಗಳಲ್ಲಿ ಸಾವಿರ ಶ್ರೀಗಂಧ ಸಸಿಗಳನ್ನು ಬೆಳೆಸಿ ಪೋಷಿಸಿದರೆ ಮಾತ್ರ ಜನ್ಮಿಸಿದಂತಹ ಭೂಮಿಗೆ ಋಣ ತೀರಿಸಿದಂತಾಗುತ್ತದೆ. ಹಾಗೂ ರೈತರು ಬದುಕು ಹಸನಾಗುವುದರಲ್ಲೇ ಸಂಶಯವಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಮುಂದಿನ ಜನಾಂಗಕ್ಕೆ ಸುಂದರ ಪರಿಸರವನ್ನು ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲಿರುವ ಕಾರಣ ಅತಿಹೆಚ್ಚು ಕಡೆಗಳಲ್ಲಿ ಹಸಿರುಮಯವಾದ ವಾತಾವರಣ ನಿರ್ಮಾಣವಾಗಬೇಕು. ಈ ಭೂಮಿಯನ್ನು ಹಚ್ಚ ಹಸಿರಿನಿಂದ ಕೂಡಿಸಿದಾಗ ಮಾತ್ರ ಪ್ರಪಂಚ ಉಳಿಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಜ್ಞಾನಿ ಡಾ. ಸುಂದರ ರಾಜ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಸಿ.ಪರಮೇಶ್ವರಪ್ಪ, ಮುಖಂಡ ಪರಮೇಶ್, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ವೆಂಕಟ ಪೈ ಗೋಪಣ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಅರಣ್ಯ ಪ್ರೇರಕ ಶ್ರೀಮತಿ ಮಮತ ಪ್ರಾರ್ಥಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಸ್ವಾಗತಿಸಿದರು. ಉಪ ವಲಯ ಅರಣ್ಯಾಧಿಕಾರಿ ಕೆ.ಆನಂದ್ ವಂದಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.