Wednesday, October 2, 2024
Wednesday, October 2, 2024

ಪ್ರೇಮಿಗಳ ದಿನ ಬೇಕೆ? ಬೇಡವೆ?

Date:

ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿಯ ಕಂಡು ವಿಷಾದ ನಗುವೊಂದು ನಕ್ಕು ಮರೆಯಾಯಿತು……..

ವಿಶ್ವದೆಲ್ಲೆಡೆ ಫೆಬ್ರವರಿ 14 ರಂದು ವ್ಯಾಲೆಂಟೈನ್ ಎಂಬ ಮುಗ್ದ ಪ್ರೇಮಿಯ ನೆನಪಿನಲ್ಲಿ ಪ್ರೇಮ ನಿವೇದನೆಯ ದಿನವನ್ನಾಗಿ‌ ಒಂದಷ್ಟು ಪ್ರೇಮಿಗಳು ಸಂಭ್ರಮ ಪಡುತ್ತಾರೆ……

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಇದು ಸಹಜವಾಗಿಯೂ, ಮಧ್ಯಪ್ರಾಚ್ಯದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಬಹುತೇಕ ಇದು ನಿಷೇಧವಾಗಿಯೂ, ಬೌದ್ದ ಧರ್ಮದ ರಾಷ್ಟ್ರಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯೂ ಆಚರಿಸಲಾಗುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಮತ್ತು ‌ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮೇಲ್ನೋಟಕ್ಕೆ ಹೆಚ್ಚು ವಿಜೃಂಭಣೆ ಇದೆ ಎನಿಸಿದರು ಮಧ್ಯಮ ಪ್ರಮಾಣದಲ್ಲಿ ಯುವಕ ಯುವತಿಯರು ಆಚರಿಸುತ್ತಾರೆ. ಮತ್ತೆ ಸಂಪ್ರದಾಯವಾದಿಗಳಿಂದ ನಿರಂತರ ಪ್ರತಿರೋಧ ಸಹ ಇದ್ದೇ ಇದೆ…..

ಪ್ರೇಮಿಗಳು ದಿನವನ್ನು ಭಾರತದಲ್ಲಿ ಆಚರಿಸಬೇಕೆ ಅಥವಾ ನಿಷೇಧಿಸಬೇಕೆ ಅಥವಾ ನಿರ್ಲಕ್ಷಿಸಬೇಕೆ ಅಥವಾ ಪರ್ಯಾಯವಾಗಿ ಬೇರೆ ರೀತಿಯಲ್ಲಿ ಆಚರಿಸಬೇಕೆ ಎಂಬ ಪ್ರಶ್ನೆ ಕೆಲವರಿಗೆ ಕಾಡಬಹುದು…

ಪ್ರೇಮವೆಂಬುದು ಗಂಡು ಹೆಣ್ಣಿನ ನಡುವಿನ ಭಾವ ಸೆಳೆತ ಅಥವಾ ಆಕರ್ಷಣೆ. ‌ಬಹುತೇಕ ಪ್ರಾಕೃತಿಕ ನಿರ್ಮಾಣ. ಸೃಷ್ಟಿಯ ನಿರಂತರ ಚಲನೆಗಾಗಿ ಅನಿವಾರ್ಯ ಕೂಡ…

ಸಾಮಾನ್ಯವಾಗಿ 18 ರಿಂದ 28 ರ ನಡುವಿನ ವಯೋಮಾನದ ಗಂಡು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಪರಿಣಾಮ ಈ ಪ್ರೇಮ ಭಾವದ ಉತ್ಕಟತೆ ಉಂಟಾಗುತ್ತದೆ. ( ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದು ನಿಜವಾದರೂ ಪ್ರೇಮದ ತೀವ್ರತೆಯ ದೃಷ್ಟಿಯಿಂದ ಈ ವಯಸ್ಸನ್ನು ಕೇಂದ್ರ ಬಿಂದುವಾಗಿ ಇಟ್ಟುಕೊಳ್ಳಲಾಗಿದೆ )

ನಾಗರಿಕ ಸಮಾಜ ಸೃಷ್ಟಿಯಾಗಿ, ಅನುಭವಗಳು ಸಂಪ್ರದಾಯಗಳಾಗಿ, ಧಾರ್ಮಿಕ ನೀತಿ ನಿಯಮಗಳು ಸಮಾಜವನ್ನು ನಿಯಂತ್ರಿಸಿ ಕಾನೂನುಗಳು ಜಾರಿಯಾದ ಮೇಲೆ ಪ್ರೇಮ ಮತ್ತು ಲೈಂಗಿಕತೆ ಕೌಟುಂಬ ಚೌಕಟ್ಟಿನಲ್ಲಿ ಬಂಧಿಯಾಯಿತು. ನೈತಿಕತೆ – ಜವಾಬ್ದಾರಿ ಮತ್ತು ವಯೋಮಾನದ ಮಿತಿ ಹೇರಲಾಯಿತು.

ಪಾಶ್ಚಾತ್ಯ ನಾಗರಿಕ ಸಮಾಜ ಇದನ್ನು ಹೆಚ್ಚು ಮುಕ್ತವಾಗಿ, ಇಸ್ಲಾಮಿಕ್ ರಾಷ್ಟ್ರಗಳು ನಿಷೇಧಾತ್ಮಕವಾಗಿ ಇದನ್ನು ಸ್ವೀಕರಿಸಿದವು. ಸಾಂಸ್ಕೃತಿಕ ಮೂಲದ ಸಾಮಾಜಿಕ ವ್ಯವಸ್ಥೆಯ ಭಾರತದಲ್ಲಿ ಗೊಂದಲ ಮುಂದುವರಿಯುತ್ತಲೇ ಇದೆ.

ಭಾರತೀಯ ಸಂಪ್ರದಾಯವಾದಿಗಳ ಮುಖ್ಯ ಆಕ್ಷೇಪಣೆ ಪ್ರೇಮ ಕಾಮ ಪ್ರಣಯ ಎಲ್ಲವೂ ಕೌಟುಂಬಿಕ ಚೌಕಟ್ಟಿನಲ್ಲಿ ಇರಬೇಕಾದ ಕ್ರಿಯೆಗಳು, ಮುಖ್ಯವಾಗಿ ಮಹಿಳೆ ಪೂಜನೀಯಳು ಮತ್ತು ಭೋಗದ ಸಂಪನ್ಮೂಲ, ಮಹಿಳೆಯರು ಅಬಲೆಯರು, ಈ ವಿಷಯದಲ್ಲಿ ಹೆಚ್ಚು ಮುಕ್ತವಾದರೆ ಪುರುಷರಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಮುಕ್ತ ಸ್ವಾತಂತ್ರ್ಯ ಬೇಡ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಸಿನಿಮಾ – ಸಾಹಿತ್ಯ ಪ್ರಕಾರಗಳಲ್ಲೂ ಹೆಣ್ಣಿನ ಶೀಲ ರಕ್ಷಣೆಯೇ ಜೀವನದ ಪರಮೋದ್ದೇಶ ಎಂದು ಬಿಂಬಿಸಲಾಗುತ್ತದೆ.

ಹಾಗೆಯೇ ಪ್ರಗತಿಪರ ಚಿಂತಕರು ಪ್ರೇಮಿಗಳ ದಿನವನ್ನು ಇಷ್ಟಪಡುವವರು ಆಚರಿಕೊಳ್ಳಲಿ ಅದಕ್ಕೆ ನಿಷೇಧ ಬೇಡ. ಹೆಣ್ಣು ಕೂಡ ಈ ಪ್ರಕೃತಿಯ ಸಹಜ ಪ್ರಾಣಿ. ಗಂಡಿನಷ್ಟೇ ಸಮ ಪ್ರಮಾಣದ ಸ್ವಾತಂತ್ರ್ಯ ಸಮಾನತೆಗೆ ಹಕ್ಕುದಾರಳು. ಆಕೆಯನ್ನು ಅನಾವಶ್ಯಕವಾಗಿ ವಿಶೇಷ ದೈವಿಕ ಮಹತ್ವ ನೀಡಿ ವೈಭವೀಕರಿಸಿ ಆಕೆಯನ್ನು ನಿಯಂತ್ರಿಸುವ ಹುನ್ನಾರ ಬೇಡ. ಆಕೆ ಪೂಜನೀಯಳು ಅಲ್ಲ. ಭೋಗದ ವಸ್ತುವೂ ಅಲ್ಲ. ಒಂದು ಸಹಜ ಜೀವಿ ಮಾತ್ರ. ಜೊತೆಗೆ ಪ್ರೇಮವೆಂಬುದು ಪ್ರಕೃತಿಯ ಸಹಜ ನಿಯಮ. ಅದು ಕಾನೂನಿನ ವ್ಯಾಪ್ತಿಯಲ್ಲಿ ಸಂಭವಿಸಲಿ ಬಿಡಿ ಎನ್ನುವ ವಾದ ಮಂಡಿಸುತ್ತಾರೆ…

ಈ ವಿಷಯದಲ್ಲಿ ಸಾಮಾನ್ಯ ಜನರದು ಬಹುತೇಕ ದ್ವಂದ್ವ ನಿಲುವು ಕಂಡುಬರುತ್ತದೆ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಸಿನಿಮಾ, ಸಾಹಿತ್ಯ, ಧಾರವಾಹಿ, ಉದ್ಯಮಿಗಳು ಮುಂತಾದ ಜನಪ್ರಿಯರ ವಿಷಯದಲ್ಲಿ ಮುಕ್ತ ಸ್ವಾತಂತ್ರ್ಯವನ್ನು ಖುಷಿಯಿಂದ ಅನುಭವಿಸುತ್ತಾರೆ ಮತ್ತು ಒಪ್ಪಿಕೊಳ್ಳುತ್ತಾರೆ. ವಿಚ್ಚೇದನ ವಿಷಯದಲ್ಲೂ ಅವರ ಬಗ್ಗೆ ಸಹಾನುಭೂತಿ ಹೊಂದಿರುತ್ತಾರೆ. ಆದರೆ ತಮ್ಮ ಮನೆಯಲ್ಲಿ ಅಥವಾ ತಮ್ಮ ಪರಿಚಯದವರಲ್ಲಿ ಈ ರೀತಿಯ ಮುಕ್ತತೆಯನ್ನು ಅನೈತಿಕ ಎಂಬುದಾಗಿ ಭಾವಿಸುತ್ತಾರೆ ಮತ್ತು ತಿರಸ್ಕರಿಸುತ್ತಾರೆ ಹಾಗು ಕೆಲವೊಮ್ಮೆ ದ್ವೇಷಿಸುತ್ತಾರೆ ಸಾಧ್ಯವಾದರೆ ಬಹಿಷ್ಕಾರಿಸುತ್ತಾರೆ. ಎಷ್ಟೊಂದು ಆತ್ಮವಂಚನೆಯಲ್ಲವೇ.

ಯಾರೋ ಅಪರಿಚಿತ ನಾಯಕ ನಾಯಕಿಯರ ಮುತ್ತುಗಳು ಸಹನೀಯ. ನಮ್ಮ ಹತ್ತಿರದವರ ಈ ನಡವಳಿಕೆ ಅನೈತಿಕ…..

ಈ ಎಲ್ಲದರ ಸಮೀಕರಣದ ನಂತರ ಇಂದಿನ ಆಧುನಿಕ ಸಮಾಜದಲ್ಲಿ……..

ಎಂತೆಂತಹ ದಿನಗಳನ್ನೋ ಆಚರಿಸುವಾಗ ಮನುಷ್ಯ ಜೀವನೋತ್ಸಾಹದ ಕುರುಹಾದ, ಯುವಕ ಯುವತಿಯರ ಮನದಾಳದ ಭಾವನೋತ್ಸವ ಉಕ್ಕಿಸುವ ” ಪ್ರೇಮಿಗಳ ದಿನವನ್ನು ” ಆಚರಿಸಲಿ ಬಿಡಿ. ಇಂದಿನ ತೀವ್ರ ವೇಗ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ, ಒತ್ತಡದ ಬದುಕಿನಲ್ಲಿ ಕನಿಷ್ಠ ಒಂದು ದಿನ ಎಲ್ಲೋ ಕೆಲವರು ಈ ದಿನವನ್ನು ಸಂಭ್ರಮಿಸಿದರೆ ನಾವು ನೋಡಿ ಸಂತೋಷ ಪಡೋಣ.

ಹಿಂದಿನ ಕೆಲವು ದಶಕಗಳ ಹಿಂದೆ ಇದ್ದ ಗಂಡು ಹೆಣ್ಣಿನ ಭಾವ ತೀವ್ರತೆ ಈಗ ಉಳಿದಿಲ್ಲ. ಹೆಣ್ಣು ಗಂಡನಿಷ್ಟೇ ಉದ್ಯೋಗಸ್ಥೆಯಾದ ಬಳಿಕ ಎಲ್ಲಾ ಕಡೆ ಮುಕ್ತ ಓಡಾಟ ಇರುವುದರಿಂದ ಹೆಣ್ಣಿನ ಬಗ್ಗೆ ಇದ್ದ ಕುತೂಹಲ ಸಹ ಕಡಿಮೆಯಾಗಿದೆ. ಪ್ರೇಮ ನಿವೇದನೆ ಗಂಡಿನ ಜವಾಬ್ದಾರಿ ಎನ್ನುವ ಪರಿಕಲ್ಪನೆ ಈಗ ಉಳಿದಿಲ್ಲ. ಅದರಲ್ಲೂ ನಗರೀಕರಣದ ನಂತರ ಹೆಣ್ಣಿನ ಪ್ರಭಾವವೇ ಹೆಚ್ಚಾಗಿರುವ ಅನುಭವವಾಗುತ್ತಿದೆ. ಟಿವಿ ಮಾಧ್ಯಮಗಳ ಮನರಂಜನಾ ಉದ್ಯಮದಲ್ಲಿ ಹಾಸ್ಯ ಸನ್ನಿವೇಶಗಳಲ್ಲಿ ಬಹುತೇಕ ಹೆಣ್ಣು ಗಂಡಿನ ಮೇಲೆ ನಿಯಂತ್ರಣ ಸಾಧಿಸಿರುವುದೇ ವಿಷಯವಾಗಿರುವುದನ್ನು ಗಮನಿಸಬಹುದು.

ಆದ್ದರಿಂದ ಈಗ ಅಂತಹ ಭಯ ಪಡುವ ಅವಶ್ಯಕತೆ ಇಲ್ಲ. ಈ ದಿನದ ಬಗ್ಗೆ ಗಂಭೀರವಾಗಿ ಯೋಚಿಸುವ ಅವಶ್ಯಕತೆಯೂ ಇಲ್ಲ. ಇದು ಸಹಜವಾಗಿ ನಡೆಯುತ್ತದೆ. ಇಷ್ಟ ಇರುವವರು ಆಚರಿಕೊಳ್ಳಲಿ. ಇಷ್ಟ ಇಲ್ಲದವರು ತಮ್ಮ ಪಾಡಿಗೆ ತಾವಿರಲಿ.
ಎಂದಿನಂತೆ ಸಂಪ್ರದಾಯವಾದಿ ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ತಿಳಿವಳಿಕೆ ಮೂಡಿಸಲಿ.

ಇಡೀ ಸಮಾಜ ಉತ್ತಮ ವಾತಾವರಣದಲ್ಲಿ ಒಳ್ಳೆಯ ನಂಬಿಕೆಯ ಪರಿಸ್ಥಿತಿಯಲ್ಲಿ ಇದ್ದರೆ ಯಾವ ಪ್ರೀತಿ ಪ್ರೇಮಗಳು ಸಮಸ್ಯೆಯಲ್ಲ. ಆದರೆ ವಂಚಕರು, ಮೋಸಗಾರರೇ ಹೆಚ್ಚಾದರೆ ಧಾರ್ಮಿಕ ಹಬ್ಬಗಳನ್ನು ಸಹ ಎಚ್ಚರಿಕೆಯಿಂದ ಆಚರಿಸಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಮೊದಲು ಒಳ್ಳೆಯ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ. ಇಲ್ಲದಿದ್ದರೆ ಕಳ್ಳರ ಸಂತೆಯಲ್ಲಿ ಎಲ್ಲರೂ ಅನುಮಾನ ಅವಮಾನದಲ್ಲಿ ಬದುಕಬೇಕಾಗುತ್ತದೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...