ಚಿಕ್ಕಮಗಳೂರು: ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸರ್ಕಾರದ ವತಿಯಿಂದ ಅದ್ದೂರಿಯಾಗಿ ಆಯೋಜಿಸಿದ್ದ ಚಿಕ್ಕಮಗಳೂರು ಹಬ್ಬದ ಖರ್ಚು-ವೆಚ್ಚಗಳ ಬಗ್ಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ತಿಳಿಸದೇ ಮೌನವಾಗಿದೆ ಎಂದು ಚಿಕ್ಕಮಗಳೂರು ಜೆಡಿಎಸ್ ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಸರ್ಕಾರದ ಕಾರ್ಯಕ್ರಮವನ್ನು ಬಿಜೆಪಿ ಕಾರ್ಯಕ್ರಮದಂತೆ ಬಿಂಬಿಸಿ ಸ್ವಪ್ರಚಾರದಲ್ಲಿ ಶಾಸಕರು ಹಾಗೂ ಜಿಲ್ಲಾಡಳಿತವು ಭಾಗಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರ ತೆರಿಗೆ ಹಣವು ಎಷ್ಟು ಖರ್ಚಾಗಿದೆ ಎಂದು ಲೆಕ್ಕ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
5 ದಿನಗಳ ಕಾಲ ಜಿಲ್ಲಾ ಉತ್ಸವ ಕಾರ್ಯಕ್ರಮಕ್ಕೆ ಸರ್ಕಾರ, ದಾನಿಗಳು ಹಾಗೂ ವಿವಿಧ ಇಲಾಖೆಯಿಂದ ಖರ್ಚಿನ ಮಾಹಿತಿ ಮತ್ತು ಯಾವ್ಯಾವ ಸಂಘ-ಸಂಸ್ಥೆಯವರಿಗೆ ಟೆಂಡರ್ ನೀಡಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಯವರಿಗೆ ಎಷ್ಟು ಮಂದಿಗೆ ಕಾಮಗಾರಿ ಕೊಡಲಾಗಿದೆ ಎಂದು ಸಭೆ ನಡೆಸುವ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕೆಲಸ ಮೊದಲಾಗಬೇಕು ಎಂದಿದ್ದಾರೆ.
ಸತತವಾಗಿ 20 ವರ್ಷಗಳ ಕಾಲ ಆಡಳಿತ ನಡೆಸಿರುವ ಶಾಸಕರು ಅಭಿವೃದ್ದಿ ಎಂದು ಹೇಳಿಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ನಗರ ಅಭಿವೃದ್ದಿ ಪರಿಸ್ಥಿತಿ ಹದಗೆಟ್ಟಿದೆ. ಕೆಲವು ರಸ್ತೆ ಗಳಲ್ಲಿ ಕಳಪೆ ಕಾಮಗಾರಿಯಾದರೆ ಇನ್ನೊಂದೆಡೆ ಗುಂಡಿ ತೆಗೆದು ಮುಚ್ಚುವ ಕೆಲಸವಾಗುತ್ತಿದೆ ಎಂದು ದೂರಿದ್ದಾರೆ.
ಚಿಕ್ಕಮಗಳೂರಿನ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆಯನ್ನು ಹಾಳುಗೆಡವಲಾಗಿದೆ. ಇದೀಗ ಕೆರೆಯನ್ನು ಗಮನಿಸಿದರೆ ಮುಚ್ಚುವ ಹಂತದಲ್ಲಿ ಕೆಲಸಗಳಾಗುತ್ತಿವೆ. ಇಷ್ಟೆಲ್ಲಾ ಹಣವನ್ನು ಬಿಡುಗಡೆ ಮಾಡಿಕೊಂಡು ಅಭಿವೃದ್ದಿ ಗೊಳಿಸದೇ ವೈಯಕ್ತಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಗರಸಭಾ ಕ್ಯಾಲೆಂಡರ್ ಬಿಡುಗಡೆಯು ಅದೇ ರೀತಿಯಾಗಿದ್ದು ಎಲ್ಲಾ ಸಂಘ-ಸಂಸ್ಥೆಗಳಲ್ಲಿ 12 ತಿಂಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದರೆ ನಗರಸಭೆಯಲ್ಲಿ ಮಾತ್ರ ಒಂದು ತಿಂಗಳ ನಂತರ ಕ್ಯಾಲೆಂಡರ್ ಬಿಡುಗಡೆ ಮಾಡಿ 11 ಎಂಬಂತೆ ತೋರಿಸುವುದರ ಜೊತೆಗೆ ಬಿಜೆಪಿಯ ಕರಪತ್ರದಂತೆ ಪ್ರತಿ ಮನೆಗಳಿಗೆ ಹಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಜಿಲ್ಲಾಡಳಿತವು ಚಿಕ್ಕಮಗಳೂರು ಹಬ್ಬದ ಖರ್ಚು-ವೆಚ್ಚಗಳ ಮಾಹಿತಿಯನ್ನು ಸಾರ್ವಜನಿಕರ ಮುಂದಿಡುವಲ್ಲಿ ವಿಳಂಭವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರು ಹಾಗೂ ಜಿಲ್ಲಾಡಳಿತದ ವಿರುದ್ಧ ಉಗ್ರವಾದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.