ತೀರ್ಥಹಳ್ಳಿ: ರೋಟರಿ ಸಂಸ್ಥೆಯು ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ದೃಷ್ಠಿಯಿಂದ ಸೇವೆಗಳನ್ನು ನಡೆಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಹೇಳಿದರು.
ರೋಟರಿ ಕ್ಲಬ್ ತೀರ್ಥಹಳ್ಳಿ ಜಿಲ್ಲಾ ಗವರ್ನರ್ ಭೇಟಿ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸೇವಾ ವಿಭಾಗದಲ್ಲಿ ಉತ್ತಮ ಕೆಲಸ ಮಾಡುತ್ತ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸ್ಪರ್ಧಾ ಚಟುವಟಿಕೆಗಳನ್ನು ನಡೆಸುತ್ತಿರುವುದು ಅಭಿನಂದನೀಯ ಕೆಲಸ ಎಂದು ಶ್ಲಾಘಿಸಿದರು.
ರೋಟರಿ ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಮಾತನಾಡಿ, ತೀರ್ಥಹಳ್ಳಿ ರೋಟರಿ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಧಿಕ ಕಾರ್ಯಕ್ರಮ ನಡೆಸಬೇಕು ಎಂದು ಸೂಚಿಸಿದರು.
ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ಮನೋಜ್ ರತ್ನಾಕರ ಆಚಾರ್ಯ ಮಾತನಾಡಿ, ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ನಮ್ಮ ಕ್ಲಬ್ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಶಿಬಿರ ಸೇರಿದಂತೆ ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಕಲಾವಿದರಿಗೆ ಭಾಷೆಯ ತೊಡಕಿಲ್ಲ. ಒಬ್ಬ ಕಲಾವಿದ ತಾನು ಬರೆದ ಚಿತ್ರದಲ್ಲಿ ಆತ ಏನು ಹೇಳ ಬಯಸುತ್ತಾನೋ ಅದನ್ನು ವಿವರಿಸುತ್ತಾನೆ. ಕಲಾವಿದರಲ್ಲಿ ವಯಸ್ಸಿನ ಮೇಲೆ ಆಧರಿಸಿ ಹಿರಿಯ, ಕಿರಿಯ ಅಂತ ಇಲ್ಲ. ಕಲೆಯ ಆಸಕ್ತಿ ಹಾಗೂ ಆತ ಶ್ರಮವಹಿಸಿ ಸಾಧನೆ ಮಾಡಿದರೆ ಒಬ್ಬ ಕಿರಿಯ ವಯಸ್ಸಿನವವರೂ ಸಹ ಹಿರಿಯ ವಯಸ್ಸಿನವರಿಗಿಂತ ಹೆಚ್ಚು ಪ್ರೇಕ್ಷಕರ ಪ್ರಶಂಸೆಗೆ ಪಾತ್ರನಾಗುತ್ತಾನೆ ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ಮಾಡಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ಕೆ.ಪಿ.ಎಸ್ ಸ್ವಾಮಿ, ಡಾ. ನಂದ ಕಿಶೋರ್, ಎಲ್ಲ ಪೂರ್ವ ಅಧ್ಯಕ್ಷರು, ಹಿರಿಯ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.