ಕಾಲುವೆ ಒತ್ತುವರಿ ತೆರವುಗೊಳಿಸುವಂತೆ ತಾಲ್ಲೂಕಿನ ಮಂಟಘಟ್ಟ ಗ್ರಾಮ ಪಂಚಾಯ್ತಿ ಕಚೇರಿ ಎದುರು ಗ್ರಾಮದ ನಿವಾಸಿ ಉಮೇಶ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ತಹಸೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಮುಖ್ಯಾಧಿಕಾರಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಹಿಂಪಡೆದಿದ್ದಾರೆ.
ಉಮೇಶ್ ಅವರು ಕಳೆದ ನಾಲ್ಕು ವರ್ಷಗಳಿಂದ ರಾಜ ಕಾಲುವೆ ಒತ್ತುವರಿಯಾಗಿರುವುದರಿಂದ ತಮ್ಮ ಮನೆಗೆ ಮಳೆ ನೀರು ನುಗ್ಗುತ್ತಿದೆ. ಇದರಿಂದ ತಮಗೆ ಪ್ರತಿ ವರ್ಷ ಸಂಕಷ್ಟ ಎದುರಾಗುತ್ತಿದೆ. ಈ ಬಗ್ಗೆ 4 ವರ್ಷಗಳಿಂದಲೂ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಗ್ರಾ.ಪಂ. ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಉಮೇಶ್ ಅವರು ಉಪವಾಸ ಸತ್ಯಾಗ್ರಹಕ್ಕೆ ಕುಳಿತು 24 ಗಂಟೆಗಳಾದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸಿ, ಸಮಸ್ಯೆ ಆಲಿಸದೇ ಇದ್ದುದ್ದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು.
ಜಿಲ್ಲಾ ಪಂಚಾಯ್ತಿ ಸಿಇಓ ಎನ್.ಡಿ. ಪ್ರಕಾಶ್ ಅವರ ಸೂಚನೆ ಮೇರೆಗೆ ಗ್ರಾ.ಪಂ. ಕಚೇರಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನಾಗರಾಜ್ ಹಾಗೂ ತಾಲ್ಲೂಕು ಪಂಚಾಯ್ತಿ ಇಓ ಅವಿನಾಶ್, ಪ್ರತಿಭಟನಾನಿರತ ಉಮೇಶ್‍ರವರ ಸಮಸ್ಯೆಯನ್ನು ಅಲಿಸಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚುಕಾಲ ಚರ್ಚಿಸಿದ ಅವರು, ನಂತರ ಸ್ಥಳ ಪರಿಶೀಲನೆ ನಡೆಸಿದರು.
ರಾಜಕಾಲುವೆ ಒತ್ತುವರಿಯಾಗಿರುವುದನ್ನು ಮನವರಿಕೆ ಮಾಡಿಕೊಂಡ ತಹಸೀಲ್ದಾರ್ ಹಾಗೂ ತಾ.ಪಂ. ಇಓ, ಒತ್ತುವರಿದಾರರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಫೆಬ್ರವರಿ 6ರಂದು ಒತ್ತುವರಿ ತೆರವುಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿ, ಉಮೇಶ್‍ರವರಿಗೆ ಸತ್ಯಾಗ್ರಹ ಕೈಬಿಡುವಂತೆ ಮನವೊಲಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.