ಚಿಕ್ಕಮಗಳೂರು: ಮನರಂಜನಾ ಕೂಟದ ಸ್ಪರ್ಧೆಗಳಲ್ಲಿ ಬಿ.ಎಸ್.ಎನ್.ಎಲ್. ನೌಕರರು ಹಾಗೂ ಕುಟುಂಬ ಸದಸ್ಯರು ಅತ್ಯಂತ ಕ್ರಿಯಾಶೀಲರಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಮನರಂಜನಾ ಕೂಟದ ಅಧ್ಯಕ್ಷ ಎಂ.ಸಿ.ಸುರೇಶ್ ಹೇಳಿದರು.
ಚಿಕ್ಕಮಗಳೂರು ನಗರದ ಸಮೀಪದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬಿ.ಎಸ್.ಎನ್.ಎಲ್. ದೂರವಾಣಿ ಮನರಂಜನಾ ಕೂಟದ ವಾರ್ಷಿಕೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಲಾಖೆಯ ನೌಕರರಿಗೆ ಕ್ರಿಕೇಟ್ ಸೇರಿದಂತೆ ವಿವಿಧ ಆಟೋಟ ಕ್ರೀಡೆಗಳನ್ನು ಆಯೋಜಿಸಿ ದೈಹಿಕ ವಾಗಿ ಶಕ್ತಿ ತುಂಬುವ ಕೆಲಸ ಮಾಡಲಾಗಿದ್ದು ಇಲಾಖೆಯ ನೌಕರರು ಕುಟುಂಬ ಸಮೇತರಾಗಿ ಅತ್ಯಂತ ಸಂತೋಷದಿಂದ ಪಾಲ್ಗೊಂಡು ಯುವಕರನ್ನು ಮೀರಿಸುವಂತೆ ಕ್ರೀಡೆಯಲ್ಲಿ ಭಾಗವಹಿಸಿ ಮೆರಗು ತಂದಿದ್ದಾರೆ ಎಂದರು.
ಕೆಲಸದ ಒತ್ತಡದಿಂದ ಬಳಲುವ ವ್ಯಕ್ತಿಗಳಿಗೆ ಕ್ರೀಡೆಯು ಮನಶಾಂತಿ ನೀಡುವ ಸಾಧನವಾಗಿದೆ. ದಿನನಿತ್ಯದ ಕೆಲಸ-ಕಾರ್ಯಗಳ ಜಂಜಾಟಗಳಲ್ಲಿ ನೌಕರರಿಗೆ ಸ್ವಲ್ಪಮಟ್ಟಿನ ಮನಸ್ಸನ್ನು ಮೃದಗೊಳಿಸಲು ಕ್ರೀಡಾ ಚಟುವಟಿಕೆಗಳು ಪೂರಕವಾಗಲಿದೆ ಎಂದರು.
ಕಾರ್ಯದರ್ಶಿ ಪಿ.ಮಂಜುನಾಥ್ ಮಾತನಾಡಿ ಮನರಂಜನಾ ಕೂಟವು ಸ್ಥಾಪನೆಯಾಗಿ ಅನೇಕ ವರ್ಷಗಳು ಕಳೆದಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಜೊತೆಗೆ ಇಲಾಖೆಯಲ್ಲಿ ನಿವೃತ್ತಗೊಂಡವರಿಗೆ ಗೌರವಿಸುವ ಕಾರ್ಯವು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ನೌಕರರ ಮಕ್ಕಳಿಗೆ ಸನ್ಮಾನಿಸಲಾಯಿತು.
ವಿವಿಧ ಕ್ರೀಡೆಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಗಳಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ ಜಿಲ್ಲಾ ಅಧಿಕಾರಿ ಕೆ.ಎಲ್.ಶಿವಣ್ಣ, ನೌಕರರಾದ ಪರಮೇಶ್ವರ್, ಕ್ರೀಡಾ ಕಾರ್ಯದರ್ಶಿ ಬಿ.ಟಿ. ಲಕ್ಷ್ಮಣ್ ,ನೌಕರರಾದ ಜೋಸೆಫ್, ಎನ್.ಜಿ.ರಮೇಶ್, ಕೆ.ಪಿ.ಸುಂದ್ರೇಶ್, ಕಿರಣ್ ಸಿಬ್ಬಂದಿ ವರ್ಗ ಹಾಗೂ ಕುಟುಂಬದವರು ಹಾಜರಿದ್ದರು.