ನೌಕರರ ಮಾನಸಿಕ ವಿಕಸನ ಮತ್ತು ನೆಮ್ಮದಿಗೆ ವಿಕಾಸ ಕೇಂದ್ರ ಸಹಕಾರಿ- ಬಿ.ವೈ.ರಾಘವೇಂದ್ರ

0
387
ನೌಕರರ ಮಾನಸಿಕ ವೇಳೆ ವಿಕಸನ ಮತ್ತು ನೆಮ್ಮದಿಗೆ ವಿಕಾಸ ಕೇಂದ್ರ ಸಹಕಾರಿ- ಬಿ.ವೈ.ರಾಘವೇಂದ್ರ
ನೌಕರರ ಮಾನಸಿಕ ವೇಳೆ ವಿಕಸನ ಮತ್ತು ನೆಮ್ಮದಿಗೆ ವಿಕಾಸ ಕೇಂದ್ರ ಸಹಕಾರಿ- ಬಿ.ವೈ.ರಾಘವೇಂದ್ರ

ಶಿವಮೊಗ್ಗ : ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರ ಮಾನಸಿಕ ವಿಕಾಸ ಹಾಗೂ ದೈಹಿಕ ನೆಮ್ಮದಿಗಾಗಿ ನೂತನ ವಿಕಾಸ ಕೇಂದ್ರ ಸಹಕಾರಿಯಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಅವರು ಶಿವಮೊಗ್ಗ ನಗರದ ಬಸವನಗುಡಿಯಲ್ಲಿ ನೂತನವಾಗಿ ಆರಂಭವಾದ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿಕಾಸ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿಶಾಲವಾದ ಪ್ರಾಂಗಣದಲ್ಲಿ ಆರಂಭಿಸಲಾಗಿರುವ ಈ ವಿಕಾಸ ಕೇಂದ್ರವು ರಾಜ್ಯದಲ್ಲಿಯೇ ಮಾದರಿಯಾಗಿದೆ. ಇಲ್ಲಿನ ಕ್ರೀಡೆ, ಸಾಹಸ ಚಟುವಟಿಕೆಗಳು ಹಾಗೂ ಇಲ್ಲಿನ ಅನೇಕ ಚಟುವಟಿಕೆಗಳಿಂದಾಗಿ ನೌಕರರಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಿ ಮನೋಬಲ ವೃದ್ಧಿಯಾಗಲಿದೆ ಎಂದವರು ನುಡಿದರು.

ಅತ್ಯಲ್ಪ ಅವಧಿಯಲ್ಲಿ ಇಂತಹ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಗೂ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರ ದಕ್ಷತೆ ಹಾಗೂ ಕರ್ತ್ಯವ್ಯವನ್ನು ಪ್ರಶಂಸಿದ ಅವರು, ಕ್ರಿಯಾಶೀಲ ವ್ಯಕ್ತಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಧಿಸಬಹುದಾದ ಸಾಧ್ಯತೆಗಳನ್ನು ತೋರಿಸಿದ್ದಾರೆ ಎಂದ ಅವರು, ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಶಿವಮೊಗ್ಗ ಜಿಲ್ಲೆ ಮಾದರಿಯೆನಿಸಿದೆ.

ಈ ಎಲ್ಲಾ ಸಫಲತೆಗಳ ಹಿಂದಿನ ಶಕ್ತಿ ನೌಕರರಾಗಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಫೆಬ್ರವರಿ 23ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗ ಆಗಮಿಸುವ ಸಾಧ್ಯತೆ ಇದೆ. ನೂತನ ವಿಮಾನ ನಿಲ್ದಾಣ, ಮೇಲ್ಸೇತುವೆ, ರಸ್ತೆ ಸೇರಿದಂತೆ ಹಲವು ಯೋಜನೆಗಳ ಲೋಕಾರ್ಪಣೆ ಹಾಗೂ ಸುಮಾರು 10 ಸಾವಿರ ಕೋಟಿ ರೂಪಾಯಿಗಳ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಸಂಸದನಾಗಿ ಕಾರ್ಯನಿರ್ವಹಿಸುತ್ತಿರುವ ಈ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಡಬೇಕಾದ ಕೆಲಸ ಕಾರ್ಯಗಳು, ಅನುದಾನ ತರುವ ಪ್ರಯತ್ನ ನಿರಂತರವಾಗಿದೆ. ಈ ನಿರಂತರ ಪ್ರಯತ್ನದ ಫಲವಾಗಿ ಕೊಡಚಾದ್ರಿ ಮತ್ತು ಕೊಲ್ಲೂರು ಕೇಬಲ್ ಕಾರ್‌ನ ಆರಂಭಕ್ಕೆ ಈಗಾಗಲೇ ಹಸಿರು ನಿಶಾನೆ ದೊರೆತಿದೆ. ಸುಮಾರು 6ಕಿ.ಮೀ. ಉದ್ದದ ಮಾರ್ಗ ಸುಮಾರು 50ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.
ಈ ಸಂಬಂಧ ಈಗಾಗಲೇ ತಜ್ಞರ ಸ್ಥಳಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಮಾತನಾಡಿ, ಸರ್ಕಾರಿ ನೌಕರರ ಬಹುದಿನಗಳ ಕನಸು ನನಸಾಗಿದೆ. ಇದರ ಯಶಸ್ಸಿನ ಹಿಂದೆ ಸಂಸದರ ಸಹಕಾರ, ಮಾರ್ಗದರ್ಶನ ಮತ್ತು ಸಿ.ಎಸ್.ಷಡಾಕ್ಷರಿ ಅವರ ಪ್ರಾಮಾಣಿಕ ಯತ್ನವಿದೆ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಕಾಣದ ನೌಕರರ ಸಂಘಟನೆ ಇಲ್ಲಿ ಸಕ್ರಿಯವಾಗಿದೆ ಮಾತ್ರವಲ್ಲ ಮಾದರಿಯಾಗಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ.25ರಷ್ಟು ಹುದ್ದೆಗಳು ಖಾಲಿ ಇವೆ. ಇಂತಹ ಅನೇಕ ಕೊರತೆಗಳಿದ್ದು, ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಕ್ಷಣಕಾಲ ನೆಮ್ಮದಿಯ ಬದುಕಿಗೆ ಈ ವಿಕಾಸ ಕೇಂದ್ರ ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಂಘವು ಕೈಗೊಳ್ಳುವ ಕೆಲಸ-ಕಾರ್ಯಗಳಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಉನ್ನತಾಧಿಕಾರಿಗಳ ಸಹಕಾರವನ್ನು ಮರೆಯುವಂತಿಲ್ಲ. ಬಿ.ಎಸ್.ಯಡಿಯೂರಪ್ಪನವರು ರಾಜ್ಯದ 6ಲಕ್ಷ ಸರ್ಕಾರಿ ನೌಕರರಿಗೆ ಕಲ್ಪವೃಕ್ಷ ಕಾಮಧೇನುವಿನಂತೆ ಕಂಗೊಳಿಸುತ್ತಾರೆ. ನೌಕರರ ಬೇಡಿಕೆಗಳನ್ನು ವಿಳಂಬಕ್ಕೆ ಅವಕಾಶವಿಲ್ಲದಂತೆ ಈಡೇರಿಸಿದ್ದಾರೆ.

ಶಿವಮೊಗ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸಭಾಭವನದ ನಿರ್ಮಾಣಕ್ಕೆ 12ಕೋಟಿ ಅನುದಾನ ನೀಡಿರುವುದು ನೌಕರರಲ್ಲಿ ಸಂತಸ ತಂದಿದೆ ಎಂದರು.

ಫೆಬ್ರವರಿ 04 ರಂದು ಸರ್ಕಾರಿ ನೌಕರರ ಕ್ಯಾಂಟೀನ್ ಆರಂಭಗೊಳ್ಳಲಿದೆ. ಈ ಕ್ಯಾಂಟೀನ್‌ನಲ್ಲಿ ಸುಮಾರು 1200 ರೀತಿಯ ಗೃಹಬಳಕೆಯ ವಸ್ತುಗಳು ಶೇ.10 ರಿಂದ 60 ರ ರಿಯಾಯಿತಿ ದರದಲ್ಲಿ ದೊರೆಯಲಿವೆ. ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಜಿಲ್ಲೆಯ ಸುಮಾರು 4,000 ನೌಕರರಿಗೆ ಈಗಾಗಲೇ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ವಿತರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಸ್ಮಾರ್ಟ್ಸಿಟಿ ಆಡಳಿತಾಧಿಕಾರಿ ಚಿದಾನಂದ ಎಸ್.ವಟಾರೆ, ಲೋಕೋಪಯೋಗಿ ಮುಖ್ಯ ಅಭಿಯಂತರ ಬಿ.ಟಿ.ಕಾಂತರಾಜ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ನಾಗರಾಜ್, ಸೂಡಾ ಆಯುಕ್ತ ಕೊಟ್ರೇಶಪ್ಪ, ಉಪವಿಭಾಗಾಧಿಕಾರಿ ಚನ್ನಪ್ಪ, ಆರ್.ಮೋಹನ್‌ಕುಮಾರ್, ಅರುಣ್, ಕೃಷ್ಣಮೂರ್ತಿ, ಆರ್.ಪಾಪಣ್ಣ, ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Previous articleಕಲಿಕೆ ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಪೂರಕವಾಗಿರಲಿ-ಡಾ.ಪವಿತ್ರಾ
Next articleಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು- ಶ್ರೀಪ್ರಸನ್ನನಾಥ ಸ್ವಾಮೀಜಿ

LEAVE A REPLY

Please enter your comment!
Please enter your name here