Book Your Advertisement Now.
ಬಳ್ಳಾರಿ: ವಿಭಜನೆಯ ನಂತರ ಇದೇ ಪ್ರಥಮ ಬಾರಿಗೆ ಆಯೋಜಿಸಲಾದ ಬಳ್ಳಾರಿ ಉತ್ಸವಕ್ಕೆ ಅಭೂತ ಪೂರ್ವ ಸ್ಪಂದನೆ ವ್ಯಕ್ತವಾಯಿತು.
2 ದಿನಗಳ ಕಾಲ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾದ ಬಳ್ಳಾರಿ ರಾಘವ ವೇದಿಕೆ ಹಾಗೂ ಐತಿಹಾಸಿಕ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ಆಸ್ವಾದಿಸಿದರು.
ಸ್ಯಾಂಡಲ್‍ವುಡ್, ಟಾಲಿವುಡ್, ಬಾಲಿವುಡ್ ಹಾಗೂ ಸ್ಥಳೀಯ ಗಾಯಕರು, ರಾಜ್ಯ, ಅಂತರರಾಜ್ಯ ವಿವಿಧ ಕಲಾ ತಂಡಗಳು ನಾಡು ಹಾಗೂ ದೇಶದ ವಿವಿಧ ಸಾಂಸ್ಕತಿಕ ವೈಭವವನ್ನು ವೇದಿಕೆ ಮೇಲೆ ಅನಾವರಣಗೊಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಬಳ್ಳಾರಿ ಉತ್ಸವದ ಅಂಗವಾಗಿ ಜ.16 ರಿಂದಲೇ ವಿವಿಧ ಸಾಂಸ್ಕೃತಿಕ ಹಾಗೂ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜಿಸಿ ಗಣಿ ನಾಡಿನ ಉತ್ಸವದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿತು.
ಉತ್ಸವದ ನಿಮಿತ್ತ ಬಳ್ಳಾರಿ ನಗರವನ್ನು ಸರ್ವ ರೀತಿಯಲ್ಲಿ ಸಿದ್ದಗೊಳಿಸಿ, ನಗರದ ಹೆಚ್.ಆರ್.ಗವಿಯಪ್ಪ ವೃತ್ತ, ಮೋತಿ ಸರ್ಕಲ್, ಎಸ್ಪಿ ಸರ್ಕಲ್, ದುರ್ಗಮ್ಮ ಗುಡಿ, ಸಂಗಮ ವೃತ್ತಗಳನ್ನು ವಿಶೇಷ ದೀಪಾಲಂಕಾರಗಳಿಂದ ಸಿಂಗರಿಸಿ ನಗರಕ್ಕೆ ಆಗಮಿಸುವ ಜನರನ್ನು ಆಕರ್ಷಿಸಲಾಯಿತು.
ಮುಖ್ಯ ರಸ್ತೆಗಳಲ್ಲಿ, ಬ್ಯಾನರ್, ದೀಪದ ತೋರಣಗಳನ್ನು ಕಟ್ಟಿ ಉತ್ಸವದ ಬಗ್ಗೆ ಸಾರಲಾಯಿತು.
ಜ.20 ರಂದು ಆಯೋಜಿಸಲಾದ ಅದ್ದೂರಿ ವಸಂತ ವೈಭವ ಅಂಬಾರಿಯಲ್ಲಿ ನಗರ ಆದಿದೇವತೆ ಕನಕದುರ್ಗಮ್ಮ ದೇವತೆ ಹೊತ್ತು ಆನೆಗಳೊಂದಿಗೆ ಸಾಗಿದ ಕಲಾ ತಂಡಗಳ ಮೆರವಣಿಗೆ ಮೈಸೂರು ದಸರಾ ವೈಭವ ಕಳೆಯನ್ನು ಉತ್ಸವಕ್ಕೆ ತಂದು ಕೊಟ್ಟಿತು.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜ.21 ರಂದು ವಿದ್ಯುಕ್ತವಾಗಿ ಚೊಚ್ಚಲ ಬಳ್ಳಾರಿ ಉತ್ಸವಕ್ಕೆ ಚಾಲನೆ ನೀಡಿ, ಶಾಶ್ವತವಾಗಿ ಪ್ರತಿ ವರ್ಷವೂ ಸರ್ಕಾರದಿಂದ ಬಳ್ಳಾರಿ ಉತ್ಸವ ಆಯೋಜಿಸುವುದಾಗಿ ತಿಳಿಸಿದರು.
ಪ್ರಥಮ ಬಾರಿಗೆ ಉತ್ಸವ ಆಯೋಜಿಸಿ ಶ್ರಮ ಪಟ್ಟ ಜಿಲ್ಲಾಡಳಿತದ ಪ್ರಯತ್ನ ಫಲ ನೀಡಿದೆ. ಜಿಲ್ಲೆಯ ಜನತೆ ಹಿಂದೆಂದೂ ಕಾಣದ ರೀತಿಯಲ್ಲಿ ಅಪಾರ ಜನಸ್ತೋಮ ಉತ್ಸವದಲ್ಲಿ ಪಾಲ್ಗೊಂಡಿತು.
50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯೊಂದಿಗೆ ಜಿಲ್ಲಾಡಳಿತ ವ್ಯವಸ್ಥಿವಾಗಿ ಆಸನ ಹಾಗೂ ಸೂಕ್ತ ಬಂದೋಬಸ್ತ್, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿತು. ಸಕುಟುಂಬ ಸಹಿತವಾಗಿ ಜನರು ತಮ್ಮದೇ ಮನೆ ಹಬ್ಬದಂತೆ ಉತ್ಸವದಲ್ಲಿ ಪಾಲ್ಗೊಂಡರು.
ಎರಡು ದಿನಗಳ ಕಾಲ ಮುನಿಸಿಪಲ್ ಮೈದಾನ ಲಕ್ಷಾಂತರ ಜನರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.
ಬಳ್ಳಾರಿ ಉತ್ಸವದೊಂದಿಗೆ ದೊಡ್ಡಮನೆಯ ನಂಟು; ಬಳ್ಳಾರಿ ಉತ್ಸವದಲ್ಲಿ ಡಾ.ರಾಜಕುಮಾರ್ ಕುಟುಂಬ ಸದಸ್ಯರು ಭಾಗವಹಿಸುವ ಮೂಲಕ ದೊಡ್ಡ ಮನೆಯ ನಂಟು ಬಳ್ಳಾರಿ ಉತ್ಸವದೊಂದಿಗೆ ಬೆಸೆದುಕೊಂಡಿತು. ನಗರದ ನಲ್ಲಚೇರುವು ಕೆರೆ ಪಕ್ಕದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ 23 ಅಡಿ ಎತ್ತರದ ಪುತ್ಥಳಿಯ ಅನಾವರಣವನ್ನು ಬಳ್ಳಾರಿ ಉತ್ಸವದಲ್ಲಿ ಸ್ಮರಣಿಯ ಕಾರ್ಯಕ್ರಮ ಎನಿಸಿಕೊಂಡಿತು.
ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿ.ಪಂ ಸಿಇಒ ಜಿ.ಲಿಂಗಮೂರ್ತಿ, ಸಹಾಯಕ ಆಯುಕ್ತ ಹೇಮಂತ್, ಎಡಿಸಿ ಮಂಜುನಾಥ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಆಹಾರ ಇಲಾಖೆ ಉಪನಿರ್ದೇಶಕ ಮಹಮದ್ ಕೈಸರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಶಕೀನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಮಲ್ಲಿಕಾರ್ಜುನ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಸವನಗೌಡ, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಬಳ್ಳಾರಿ ಉತ್ಸವದ ಯಶಸ್ಸಿನ ಹಿಂದಿನ ಕ್ರಿಯಾ ಶಕ್ತಿಯಾಗಿ ಕಾರ್ಯನಿರ್ವಹಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.