Wednesday, October 2, 2024
Wednesday, October 2, 2024

ಸಾವೆಂಬ ನೋವು (ಇದು ಕಂಬನಿ‌ ಮಿಡಿತ)

Date:

Book Your Advertisement Now.

ಭಗವಂತ ಕೊಡುವಾಗ ಮೊಗೆ ಮೊಗೆದು ಕೊಡುತ್ತಾನೆ ಅನ್ನುತ್ತಾರೆ. ಹಾಗೆ ಕೊಟ್ಟದ್ದು ಪ್ರವಾಹೋಪಾದಿಯಲ್ಲಿ ಆದರೆ, ಅದರ ಹೊಡೆತದಿಂದ ತಪ್ಪಿಸಿಕೊಳ್ಳುವುದಾಗಲಿ ಅಥವಾ ಅದರೊಂದಿಗೆ ಹೋಗುವ ಧೈರ್ಯವಾಗಲಿ ಮಾಡುವುದು ಕಷ್ಟಸಾಧ್ಯವೇ ಸರಿ. ’ಜಾತಸ್ಯ ಹಿ ಮರಣಂ ಧ್ರುವಮ್’ ಎಂದಿರುವುದು ಹುಟ್ಟಿದವನು ಸಾಯಬೇಕು ಎಂಬರ್ಥ ಹುಟ್ಟಿ ಎಳೆವಯಸ್ಸಿನಲ್ಲೇ ಸಾಯುವುದಲ್ಲ… ಪೂರ್ಣ ಆಯುಷ್ಯವನ್ನು ಅನುಭವಿಸಿ ಮನುಷ್ಯ ಮರಣಿಸಬೇಕು. ಆಗ ಸಮಾಧಾನವಾಗಿರಬಹುದು.
ಆದರೆ, ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವುದು ಹಿರಿಯರೆದುರಿಗೆ ಕಿರಿಯರ ಮರಣ…

ಇನ್ನೂ ಬಾಳಿ ಬದುಕುವುದು ಸಾಕಷ್ಟಿದ್ದರೂ ಅವರ ಬದುಕು ಇನ್ನೂ ಅರಳುವ ಮುನ್ನವೇ ಬಾಡುವುದನ್ನು ಕಾಣುತ್ತಿದ್ದೇವೆ. ಇದು ಕಲಿಯುಗದ ಲಕ್ಷಣಗಳಲ್ಲಿ ಈ ಬಗೆಯೂ ಒಂದಾಗಿರಬಹುದು…

ವಯಸ್ಸಾದವರೆದುರಿಗೆ ಮೊಮ್ಮಕ್ಕಳು ಸಾಯುವುದು. ಸಾವಿಲ್ಲದ ಮನೆ ಇಲ್ಲ ಸರಿ ಆದರೆ, ಆ ಸಾವು ದುರ್ಮರಣ ಆಗಬಾರದು. ಇಷ್ಟೆಲ್ಲಾ ಬರೆಯಲು ಕಾರಣ ನಿನ್ನೆಯಷ್ಟೇ ಮರಣಿಸಿದ ಸಮಿತ್ ಎಂಬ ಹತ್ತೊಂಭತ್ತರ ಹರೆಯದ ತರುಣನ ಸಾವು. ಆತನ ಬಗ್ಗೆ ಹೇಳಲೇ ಬೇಕು ಎಂದೇ ಈ ಬರವಣಿಗೆ. ನಾನು ಅತೀ ಹತ್ತಿರದಿಂದ ಅವನನ್ನ ಕಂಡಿರದಿದ್ದರೂ ನಮ್ಮ ಮನೆಯ ಎದುರಿನ ರೇವತಿ ಅಮ್ಮನಿಂದ ಸಾಕಷ್ಟು ಬಾರಿ ಆತನ ಬಗ್ಗೆ ಕೇಳಿ ತಿಳಿದಿದ್ದೆ. ತನ್ನ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಆತ ಜೊತೆಗಿದ್ದ ತನ್ನ ಚಿಕ್ಕ ತಮ್ಮನಿಗೆ ತಂದೆಯೂ ಆಗಿ, ಅಣ್ಣನೂ ಆಗಿ ನೋಡಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ ತಾಯಿಯ ಪ್ರೀತಿಯ ಮಗ, ಅಜ್ಜಿಯ ಮುದ್ದಿನ ಮೊಮ್ಮಗ…
ತಾನು ಓದಲೆಂದು ಉಡುಪಿಗೆ ಹೋದರೂ ಸಹ ಬಂದಾಗ ಮನೆಯವರೆಲ್ಲರ ಕಾಳಜಿ ಅವನ ಹೆಗಲಿಗೆ ಜವಾಬ್ದಾರಿಯಂತೆ ಏರಿ ಕುಳಿತಿರುತ್ತಿತ್ತು.

ಅಮ್ಮ ಶಿವಮೊಗ್ಗದ ಪ್ರಖ್ಯಾತ ಶಾಲೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರೂ ಅದಾವುದರ ಇನ್ಫ್ಲುಯೆನ್ಸ್ ಬಳಸಿಕೊಳ್ಳದೆ ನಿಷ್ಠೆಯಿಂದ ಓದಿ 2019 ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 624ಅಂಕ ಗಳಿಸುವುದರೊಂದಿಗೆ ರಾಜ್ಯ ಹಾಗೂ ಜಿಲ್ಲೆಯ ಮಟ್ಟದಲ್ಲಿ ಗುರುತಿಸಿಕೊಂಡು ಅನೇಕ ಸನ್ಮಾನಗಳಿಗೆ ಭಾಜನನಾಗಿದ್ದ.

ಎಲ್ಲ ಶಿಕ್ಷಕರ ಅಚ್ಚುಮೆಚ್ಚಿನ ಶಿಷ್ಯನೂ ಆಗಿದ್ದ ಸಮಿತ್. ಶ್ರದ್ಧೆಯ ಓದು ಅವನನ್ನು ಸಿ.ಎ. ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಗುರಿಯ ಕಡೆಗೆ ಕೊಂಡೊಯ್ದು ಉಡುಪಿಯ ಪೂರ್ಣಪ್ರಜ್ಞಾ ಸಂಜೆ ಕಾಲೇಜಿನಲ್ಲಿ ಬಿ.ಕಾಂ ಪದವಿ. ಬೆಳಗ್ಗೆ ಸಿ.ಎ. ಪರೀಕ್ಷೆಯ ಕೋಚಿಂಗ್‌ಗಾಗಿ ಈ ಊರನ್ನು ಬಿಡಬೇಕಾಗಿ ಬಂತು.

ಎಲ್ಲೆಡೆಯೂ ಒಳ್ಳೆಯ ಶಿಸ್ತಿನ ಹುಡುಗನೆಂದೇ ಪ್ರಸಿದ್ಧಿ ಹೊಂದಿದ್ದಲ್ಲದೇ ಮೆಚ್ಚಿನ ವಿದ್ಯಾರ್ಥಿ ಕೂಡ ಆಗಿ ಹೊರಹೊಮ್ಮಿದ್ದ. ತಾನು ತಾಯಿ, ಅಜ್ಜಿಯರನ್ನು ತನ್ನ ತಮ್ಮಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಬೆಟ್ಟದಷ್ಟು ಆಸೆ ಕನಸುಗಳನ್ನು ಹೊತ್ತಿದ್ದ ಆತ ನಿನ್ನೆಯ ಬೈಕ್ ಅಪಘಾತದಲ್ಲಿ ಎಲ್ಲರ ಕನಸಿನ ಕುಡಿ ಚಿಗುರುವುದರಲ್ಲೇ ಮುರುಟಿದಂತಾಗಿದೆ. ಮನೆಯ ಊರುಗೋಲೇ ಕಳಚಿ ಬಿದ್ದಂತಹ ಭಾವ ಭಾಸವಾಗಿದೆ. ಭಗವಂತ ಅವನಲ್ಲಿ ಎಲ್ಲ ಒಳ್ಳೆಯ ಗುಣಗಳನ್ನು ತುಂಬಿ ಅವನ ಒಳ್ಳೆತನ ಹೆಚ್ಚಾಯಿತೆಂದು ತನ್ನೆಡೆಗೆ ಕರೆದುಕೊಂಡನೇನೋ ಎಂಬುದು ಅವನ ಅಂತಿಮ ದರ್ಶನಕ್ಕೆ ಬಂದವರೆಲ್ಲರ ಮಾತು. ಅದೂ ಅಲ್ಲದೇ ಹೂದೋಟದ ಚೆಂದದ ಹೂವೇ ಭಗವಂತನಿಗೆ ಪ್ರೀತಿ ಅಲ್ಲವೇ… ಸಮಿತ್ ಸದ್ಗುಣಗಳ ಗಣಿ. ಅವನು ವಿನಯತೆಯ ಸಾಕಾರ ಮೂರ್ತಿ. ಎಸ್.ಎಸ್.ಎಲ್.ಸಿಯಲ್ಲಿ ಅಧಿಕ ಅಂಕಗಳಿಸಿದ ಆತನ ಮಾತುಗಳನ್ನು ಕೇಳುತ್ತಿದ್ದೆ.

ಶ್ರದ್ಧೆಯ ಓದು, ಪ್ರಾಮಾಣಿಕ ಪ್ರಯತ್ನ, ಒತ್ತಡ ರಹಿತ ಪರೀಕ್ಷೆಯ ತಯಾರಿ… ಉತ್ತರ ಬರುತ್ತಿಲ್ಲವೆಂದು ಬಾಯಿಪಾಠ ಮಾಡಿ ತೊಂದರೆಗೆ ಒಳಗಾಗಬಾರದು. ಎಂಬ ಕಿವಿಮಾತು ಎಲ್ಲವೂ ಆತನ ಸಜ್ಜನಿಕೆಗೆ ಸಾಕ್ಷಿ.
ಆ ಮನೆಗೆ ಹೋದರೆ ಕಾಣಸಿಗುವುದು ಸಣ್ಣ ವಯಸ್ಸಿನಲ್ಲಿ ಪತಿಯನ್ನೂ ಕಳೆದುಕೊಂಡು ಮಗನನ್ನೂ ಕಳೆದುಕೊಂಡ ಹೆಣ್ಣುಮಗಳ ದುಃಖ. ತನ್ನ ಮುದ್ದಿನ, ಮನೆಗೆ ಊರುಗೋಲಿನಂತಿದ್ದ ಮೊಮ್ಮಗನ ಕಳೆದುಕೊಂಡು ರೋದಿಸುತ್ತಿರುವ ಅಜ್ಜಿ. ಅವರಿಗಂತೂ ತನ್ನ ಪತಿಯ, ಮಗನ ಹಾಗೂ ಮೊಮ್ಮಗನ ಸಾವಿನ ದರ್ಶನ ಅಬ್ಬಾ ಆ ನೋವು ಹೇಳಲಸಾಧ್ಯ… ಸಾವು…!, ಬದುಕಿನ ಭರವಸೆಯನ್ನೇ ಕಳೆಯುವಂತಾದರೆ ಬದುಕಿದ್ದವರ ಸ್ಥಿತಿ ಶೋಚನೀಯ… ಆ ಕುಟುಂಬಕ್ಕೆ ಭಗವಂತ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದಷ್ಟೇ ನಮ್ಮ ಪ್ರಾರ್ಥನೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾವು ತುಂಬಾ ಕೇಳಿ ಬರುತ್ತಿರುವುದು ವಿಷಾದದ ಸಂಗತಿಯಾಗಿದೆ… ಮೊನ್ನೆ ಮೊನ್ನೆಯಷ್ಟೇ ಬಿ.ವೈ. ರಾಘವೇಂದ್ರ ಅವರ ಆಪ್ತ ಛಾಯಾಗ್ರಾಹಕ, ಕ್ರಿಯಾಶೀಲತೆಗೆ ಮತ್ತೊಂದು ಹೆಸರಾದ ಪ್ರಸನ್ನನ ಸಾವಿನ ದುರಂತ ಮಾಸುವ ಮುನ್ನವೇ ಇಂತಹ ಆಘಾತಗಳು ಬಂದೆರಗಿರುವುದು ಅತ್ಯಂತ ದುಃಖಕರ… ಈ ದುರ್ಮರಣ ನಿಲ್ಲಲಿ… ಕ್ರಿಯಾಶೀಲ ಯುವ ಜನತೆ ಬಾಳಲಿ…, ಈ ಸಾವು ನ್ಯಾಯವೇ ಎಂದು ಗೋಗರೆಯುವ ಸ್ಥಿತಿ ಯಾರಿಗೂ ಬಾರದಿರಲಿ. ಸಮಿತ್, ಪ್ರಸನ್ನರಂತವರು ಮತ್ತೆ ಹುಟ್ಟಿ ಬರಲಿ…

-ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಪಿ ಯು ಕಾಲೇಜ್, ಶಿವಮೊಗ್ಗ

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...