ಹಂಪಿ ಉತ್ಸವ 2023; ವೇದಿಕೆ ನಿರ್ಮಾಣಕ್ಕೆ ಸಜ್ಜು
ಹೊಸಪೇಟೆ(ವಿಜಯನಗರ),ಜ.18(ಕರ್ನಾಟಕ ವಾರ್ತೆ): ಜನವರಿ ತಿಂಗಳ ಅಂತ್ಯದಲ್ಲಿ ನಡೆಯಲಿರುವ ವಿಶ್ವವಿಖ್ಯಾತ ಹಂಪಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳುತ್ತಿದೆ.
ಹಂಪಿಯ ಗಾಯಿತ್ರಿ ಪೀಠದ ಮೈದಾನದ ಆವರಣದಲ್ಲಿ ಹಂಪಿ ಉತ್ಸವ ಸಮಾರಂಭದ ಅಂಗವಾಗಿ ಮುಖ್ಯವೇದಿಕೆಯನ್ನು ನಿರ್ಮಿಸಲು ಸಜ್ಜುಗೊಳಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಗಾಯತ್ರಿ ಪೀಠ, ಎದುರು ಬಸವಣ್ಣ ಮಂಟಪ, ವಿರುಪಾಕ್ಷೇಶ್ವರ ದೇವಸ್ಥಾನದ ಆವರಣ ಹಾಗೂ ಸಾಸುವೆಕಾಳು ಗಣಪ ಮಂಟಪದ ಬಳಿ ವೇದಿಕೆ ನಿರ್ಮಿಸಲಾಗುತ್ತಿದೆ.

ಮುಖ್ಯವೇದಿಕೆಯಾದ ಗಾಯಿತ್ರಿಪೀಠದ ಆವರಣದ ಸ್ವಚ್ಛತೆಯನ್ನು ಪೌರ ಕಾರ್ಮಿಕರು ಕೈಗೊಳ್ಳುತ್ತಿದ್ದಾರೆ. ಮುಖ್ಯ ವೇದಿಕೆ ಜೊತೆಗೆ ಉಳಿದ ವೇದಿಕೆಗಳ ಪರಿಶೀಲನೆ ಹಾಗೂ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ.
ಪಾರ್ಕಿಂಗ್ ಸೌಲಭ್ಯ: ಹಂಪಿ ಉತ್ಸವಕ್ಕೆ ಆಗಮಿಸಲಿರುವ ಪ್ರವಾಸಿಗರ ಅನುಕೂಲಕ್ಕಾಗಿ ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸ್ವಚ್ಛತೆಯನ್ನು ಹಾಗೂ ಹೆಚ್ಚಿನ ಸ್ಥಳಾವಕಾಶವನ್ನು ನಿರ್ಮಿಸಲು ಪೌರಕಾರ್ಮಿಕರು ಕಾರ್ಯನಿರತರಾಗಿದ್ದಾರೆ.
