ಯುವಶಕ್ತಿಯನ್ನು ಕಟ್ಟಿಕೊಂಡು ದೇಶದಲ್ಲಿ ವಿಭಿನ್ನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ದೇಶದ ಬೇರೆ ಬೇರೆ ಭೌಗೋಳಿಕ ಪ್ರದೇಶಗಳ ಯುವಕರ ತಂಡಗಳು ಬಂದಿವೆ. ಇಲ್ಲಿನ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ಅಂತಿಮವಾಗಿ ಭಾರತವೇ ಗೆಲ್ಲುತ್ತದೆ.
ಆದ್ದರಿಂದ ಯುವಜನೋತ್ಸವದಲ್ಲಿ ಭಾಗವಹಿಸುವ ತಂಡಗಳು ವಿಕಸಿತ ಭಾರತ ಸಮರ್ಥ ಭಾರತವನ್ನು ಗಮನದಲ್ಲಿಟ್ಟುಕೊಂಡು ದೇಶವನ್ನು ಮುನ್ನಡೆಸಬೇಕು ಎಂದು ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಕರೆ ನೀಡಿದರು.
ರಾಷ್ಟ್ರೀಯ ಯುವಜನೋತ್ಸವವು ಇಡೀ ದೇಶವನ್ನು ಭೌಗೋಳಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದುಗೂಡಿಸುತ್ತದೆ ಎಂದು ಕೇಂದ್ರ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವರಾದ ಅನುರಾಗ್ ಸಿಂಗ್ ಠಾಕೂರ್ ಅಭಿಪ್ರಾಯಪಟ್ಟರು.
ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನಸ್ಸು ಇರುತ್ತದೆ. ಆದ್ದರಿಂದ ಗೀತಾ-ರಾಮಾಯಣ ಓದುವ ಮೊದಲು ಫುಟ್ಬಾಲ್ ಆಡುವಂತೆ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು.
ಪ್ರಸ್ತುತ ಪ್ರಧಾನ ಮಂತ್ರಿಗಳು ಕೂಡ ಅದೇ ಮಾರ್ಗದಲ್ಲಿ ದೇಶದ ಯುವ ಜನತೆಯನ್ನು ಕೊಂಡೊಯ್ಯುತ್ಯಿದ್ದಾರೆ.
ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ಕನಸುಗಳ ಸಾಕಾರಕ್ಕೆ ಯುವಸಮುದಾಯ ಕೈಜೋಡಿಸುವ ಅಗತ್ಯವಿದೆ.
ಮೋದಿಜಿಯವರ ನಾಯಕತ್ವದಲ್ಲಿ ಜಿ-20 ಅಧ್ಯಕ್ಷತೆ ಸ್ಥಾನವು ಭಾರತಕ್ಕೆ ಲಭಿಸಿದೆ. ಕ್ರೀಡೆಗಳಲ್ಲಿ ಅತ್ಯುನ್ನತ ಸಾಧನೆಯನ್ನು ದೇಶವು ಸಾಧಿಸಿದೆ.
ಭಾರತವನ್ನು ವಿಕಸಿತಗೊಳಿಸುವ ಆಂದೋಲನವು ಒಬ್ಬ ನರೇಂದ್ರ ಮೋದಿ ಅವರಿಂದ ಆರಂಭಗೊಂಡು ಈಗ ಇನ್ನೊಬ್ಬ ನರೇಂದ್ರ ಅವರ ಮೂಲಕ ಮುಂದುವರಿದಿದೆ.
ಭ್ರಷ್ಟಾಚಾರ ಮುಕ್ತ, ನಶಾಮುಕ್ತವಾಗಿರುವ ಸ್ವಸ್ಥ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ಕೈಜೋಡಿಸಬೇಕು ಎಂದು ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ಕರೆ ನೀಡಿದರು.
ಕೇಂದ್ರ ಸಂಸದೀಯ ವ್ಯವಹಾರಹಗಳು,ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಮಾತನಾಡಿ,ಸ್ವಾಮಿ ವಿವೇಕಾನಂದರ ಜಯಂತಿಯ ಈ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಲಾಗಿದೆ.
ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಭಾರತ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.ಪ್ರಧಾನ ಮಂತ್ರಿಯವರ ಆಶೀರ್ವಾದದಿಂದ ಧಾರವಾಡ ಜಿಲ್ಲೆಗೆ ಐಐಟಿ,ಐಐಐಟಿ,ನವದೆಹಲಿಗೆ,ಕಾಶಿಗೆ ನೇರ ವಿಮಾನಯಾನ ಸೌಕರ್ಯ ದೊರೆತಿದೆ.ದೇಶದ ಯುವ ಜನತೆ ಉತ್ಸಾಹದಿಂದ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.
ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಇಲಾಖೆಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಏಲಕ್ಕಿ ಹಾರ,ವಿವೇಕಾನಂದರ ವಿಗ್ರಹ, ರಾಷ್ಟ್ರಧ್ವಜ ಚೌಕಟ್ಟಿನ ಸ್ಮರಣಿಕೆ:
ಸಾಂಪ್ರದಾಯಿಕ ಶಾಲು ಹೊದಿಸಿ,ಹಾವೇರಿಯ ಏಲಕ್ಕಿ ಹಾರ,ಮುತ್ತಿನಿಂದ ಅಲಂಕರಿಸಿದ ಪೇಟ ತೊಡಿಸಿ,ತೇಗದ ಮರದಲ್ಲಿ ತಯಾರಿಸಿದ ಸ್ವಾಮಿ ವಿವೇಕಾನಂದರ ವಿಗ್ರಹ,ಗರಗ-ಬೆಂಗೇರಿಯಲ್ಲಿ ಸಿದ್ಧವಾಗುವ ರಾಷ್ಟ್ರಧ್ವಜವನ್ನು ಅಳವಡಿಸಿದ ಚೌಕಟ್ಟಿನ ಸ್ಮರಣಿಕೆ ನೀಡಿ ಪ್ರಧಾನಿಯವರನ್ನು ಗೌರವಿಸಲಾಯಿತು.
ಕೇಂದ್ರ ಗೃಹ ವ್ಯವಹಾರಗಳು ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸಚಿವರಾದ ನಿಸಿತ್ ಪ್ರಮಾಣಿಕ್,
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ, ಕ್ರೀಡೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ,
ಗಣಿ-ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ,ಮಾಜಿ ಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ವಿಧಾನಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಪ್ರದೀಪ ಶೆಟ್ಟರ್,ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ,ಜಂಗಲ್ ರೆಸಾರ್ಟ್ಸ ಅಭಿವೃದ್ದಿ ನಿಗಮ ಅಧ್ಯಕ್ಷ ರಾಜು ಕೋಟೆಣ್ಣವರ,ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರ ಈರೇಶ್ ಅಂಚಟಗೇರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ತಾಕರ್ಷಕ ಪಥಸಂಚಲನ:
ದೇಶದ ವೈವಿಧ್ಯಮಯ ಕಲೆ,ಪೋಷಾಕು,ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ತಾಕರ್ಷಕ ಪಥಸಂಚಲನವು ವಿವಿಧ ರಾಜ್ಯಗಳ ತಂಡಗಳಿಂದ ಜರುಗಿತು.ರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್ನಿನ ವಿದ್ಯಾರ್ಥಿಗಳಿಂದ ಕಲಾತ್ಮಕ ಯೋಗಾಸನ ಮತ್ತು ಮಲ್ಲಕಂಬ ಸಾಹಸಗಳ ಪ್ರದರ್ಶನ ಜರುಗಿತು.