ಸೇವೆಯೇ ಜೆಸಿಐ ಸಂಸ್ಥೆಯ ಪ್ರಮುಖ ಆಶಯ. ಸಮಾಜಮುಖಿ ಆಶಯವನ್ನು ಕಾರ್ಯರೂಪಕ್ಕೆ ತರುವ ವಿಶೇಷ ಅವಕಾಶವನ್ನು ಜೆಸಿಐ ಸಂಸ್ಥೆ ಒದಗಿಸುತ್ತದೆ ಎಂದು ಸೌರಭ ಟ್ರಸ್ಟ್ ನಿರ್ದೇಶಕಿ, ಲೇಖಕಿ ಗೀತಾಂಜಲಿ ಪ್ರಸನ್ನಕುಮಾರ್ ಹೇಳಿದರು.
ಶಿವಮೊಗ್ಗದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ಸಂಸ್ಥೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ಪ್ರತಿಯೊಬ್ಬರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ಸೇವಾ ಮನೋಭಾವ ಮತ್ತು ಸಮಾಜಮುಖಿ ಆಲೋಚನೆಗಳಿಗೆ ಜೆಸಿಐ ಪ್ರತಿರೂಪ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ಮಾಡಿರುವ ವಿಶೇಷ ಕಾರ್ಯಗಳು ಎಲ್ಲರಿಗೂ ಸ್ಫೂರ್ತಿ. ಮುಂದಿನ ಸಾಲಿನಲ್ಲಿಯೂ ಈ ಸಂಸ್ಥೆ ಉತ್ತಮ ಕೆಲಸಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.
ಜೆಸಿಐ ಶಿವಮೊಗ್ಗ ಭಾವನಾ 2022ರ ಅಧ್ಯಕ್ಷೆ ಶಾರದಾ ಶೇಷಗಿರಿಗೌಡ ಮಾತನಾಡಿ, ಜೆಸಿಐ ಅಧ್ಯಕ್ಷೆ ಆಗಿದ್ದ ಅವಧಿಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ‘ನಮ್ಮ ನಡಿಗೆ ಹಳ್ಳಿ ಕಡೆಗೆ’ ಎಂಬ ವಿಶೇಷ ಕಾರ್ಯಕ್ರಮ ರೂಪಿಸಿ ಸೇವಾ ಚಟುವಟಿಕೆಗಳನ್ನು ನಡೆಸಿದೆವು. ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಕೃಷಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉಪಯುಕ್ತ ಆಗುವಂತೆ ಆಯೋಜಿಸಿದ್ದ ಸಮಾಜಮುಖಿ ಚಟುವಟಿಕೆಗಳು ವಲಯ ಮಟ್ಟದಲ್ಲಿ ಯಶಸ್ವಿಯಾಯಿತು ಎಂದು ಹೇಳಿದರು.
ಆರೋಗ್ಯ ಉಚಿತ ತಪಾಸಣಾ ಶಿಬಿರ, ಮಡಿಲು ಕಾರ್ಯಕ್ರಮ, ಸರ್ಕಾರಿ ಶಾಲೆ ದತ್ತು ಸ್ವೀಕಾರ ಹಾಗೂ ಅಭಿವೃದ್ಧಿ, ಪರಿಸರ ಕಾಳಜಿ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ತರಬೇತಿ, ಯೋಧರಿಗೆ ನಮನ, ಕಾರ್ಮಿಕರಿಗೆ ಕಿಟ್ ವಿತರಣೆ ಸೇರಿದಂತೆ ವಿಶೇಷ ಸೇವಾ ಕಾರ್ಯಗಳನ್ನು ನಡೆಸಿದೇವು.
ಜೆಸಿಐ ನಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದರಿಂದ ತಾಳ್ಮೆ, ಸಹನೆ ಹಾಗೂ ಮುಂದಾಳತ್ವ ಗುಣ ಬೆಳೆಯುತ್ತದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಭಾವನಾ 2023ರ ಅಧ್ಯಕ್ಷೆ ಪೂರ್ಣಿಮಾ ಸುನೀಲ್ ಮಾತನಾಡಿ, ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವ ಹಾಗೂ ಸಮಾಜಮುಖಿ ಆಲೋಚನೆ ಬೆಳೆಸುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಪಾತ್ರ ವಹಿಸುತ್ತದೆ. ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಸಾಮಾಜಿಕ ಕಳಕಳಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸಲಾಗುವುದು.
ಆರೋಗ್ಯ ಶಿಬಿರ, ತರಬೇತಿ ಕಾರ್ಯಾಗಾರ, ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಜನ್ಮದಿನ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರಯ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸ್ಕೂಲ್ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು.
ಜೆಸಿಐ ಶಿವಮೊಗ್ಗ ಭಾವನಾ 2023ರ ಅಧ್ಯಕ್ಷೆ ಪೂರ್ಣಿಮಾ ಸುನೀಲ್, ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಟಿ.ಎಂ.ವೀರಸ್ವಾಮಿ, ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರ ಪ್ರಜ್ವಲ್ ಎಸ್ ಜೈನ್, ಕಾರ್ಯಕ್ರಮ ನಿರ್ದೇಶಕಿ ವಿಜಯಾ ಶಿವಕುಮಾರ್, 2023ರ ಜೆಸಿಐ ಶಿವಮೊಗ್ಗ ಭಾವನಾ ಕಾರ್ಯದರ್ಶಿ ಕವಿತಾ ಜೋಯಿಸ್, ಜೆಸಿಐ ಶಿವಮೊಗ್ಗ ಭಾವನಾ ಮಾಜಿ ಅಧ್ಯಕ್ಷೆ ಸುಗುಣಾ ಸತೀಶ್, ಕುಮಾರಿ ಜನ್ಯ ಮತ್ತಿತರರು ಉಪಸ್ಥಿತರಿದ್ದರು.