ಜೆಡಿಎಸ್‌ನ ಪಂಚರತ್ನ ಯೋಜನೆಗಳೇ ನಾಡಿನ ಜನತೆಯ ಸಮಸ್ಯೆ ಗಳನ್ನು ಆಲಿಸುವ ಜೊತೆಗೆ ಬಡ ಹಾಗೂ ಹಿಂದುಳಿದ ಜನಾಂಗದವರಿಗೆ ಸದೃಢವಾಗಿ ಸ್ಪಂದಿಸುವ ಪ್ರಾದೇಶಿಕ ಪಕ್ಷ ಎಂದು ಚಿಕ್ಕಮಗಳೂರು ವಿಧಾನಸಭಾ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹೇಳಿದರು.
ಚಿಕ್ಕಮಗಳೂರಿನ ತಾಲ್ಲೂಕಿನ ಲಕ್ಯಾ ಹೋಬಳಿಯ ಕಣಿವೆಹಳ್ಳಿ ಹಾಗೂ ಕ್ಯಾತನಬೀಡು ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು ಜನತೆಯು ಚುನಾವಣಾ ವಿಷಯವನ್ನು ಗಂಭೀರವಾಗಿ ಆಲೋಚಿಸಿ ಸೂಕ್ತ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆಗೊಳಿಸಬೇಕು ಎಂದು ಹೇಳಿದರು.
ಬಡವರ ಪರ ಉತ್ತಮ ಚಿಂತನೆ ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್. ಪ್ರತಿಯೊಬ್ಬರು ತಮ್ಮ ವ್ಯಾಪ್ತಿಗಳಲ್ಲಾಗಿರುವ ಅಭಿವೃದ್ದಿ ಶೂನ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸದ ಉಜ್ವಲ ಭವಿಷ್ಯಕ್ಕಾಗಿ ಹಾಗೂ ಆರ್ಥಿಕವಾಗಿ ಸದೃಢವಾಗಲು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿದರೆ ಮುಂದಿನ ದಿನಗಳಲ್ಲಿ ಜನತೆಗೆ ವರದಾನವಾಗಲಿದೆ ಎಂದು ಹೇಳಿದರು.
ಪಕ್ಷದ ವತಿಯಿಂದ ಇದುವರೆಗೂ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅನೇಕ ಬಾರಿ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಿ ಗ್ರಾಮಸ್ಥರನ್ನು ಸ್ಪಂದಿಸುವ ಕಾರ್ಯ ಮಾಡಲಾಗಿದೆ. ಈ ಆಲೋಚನೆಗಳು ಕೇವಲ ಜೆಡಿಎಸ್‌ನಲ್ಲಿದೆಯೇ ಹೊರತು ಇನ್ಯಾವ ರಾಷ್ಟ್ರೀಯ ಪಕ್ಷಗಳಲ್ಲಿರುವುದಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳು ಹಾಗೂ ಪಕ್ಷದ ಕಾರ್ಯಕರ್ತರುಗಳು ಹಾಜರಿದ್ದರು.