ಉದ್ಯಮದಾರರು ನಿವೇಶನ ಹಾಗೂ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಹಾಗೂ ದಾಖಲೆಗಳ ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.
ಜಿಎಸ್‌ಟಿ ಸೌಲಭ್ಯ ಪಡೆಯುವುದು ಆನ್‌ಲೈನ್ ವ್ಯವಸ್ಥೆ ಆಗಿರುವುದರಿಂದ ಯಾವುದೋ ಉದ್ಯಮಿಗಳ ನಿವೇಶನ ದಾಖಲೆಗಳನ್ನು ಬಳಸಿ ವಂಚಕರು ಜಿಎಸ್‌ಟಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಉದ್ಯಮಿಗಳು ಹಾಗೂ ಮಾಲೀಕರಿಗೆ ತಿಳಿಯದಂತೆ ದಾಖಲೆ ಸಲ್ಲಿಸಿ ಜಿಎಸ್‌ಟಿ ಸಂಖ್ಯೆ ಪಡೆದುಕೊಂಡು ಮೋಸ, ವಂಚನೆ ಮಾಡುವುದು ವಿವಿಧ ಕಡೆಗಳಲ್ಲಿ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ದೇಶದ ವಿವಿಧ ಕಡೆಗಳಲ್ಲಿ ವಂಚನೆ ನಡೆಸುತ್ತಿರುವ ಮೋಸಗಾರರು ಯಾವುದೋ ಸ್ಥಳಗಳಲ್ಲಿ ಕುಳಿತು ನಿಮ್ಮ ದಾಖಲೆಗಳನ್ನು ಬಳಸಿಕೊಂಡು ಜಿಎಸ್‌ಟಿ ಪಡೆಯುತ್ತಾರೆ. ನಂತರ ತೆರಿಗೆ ಪಾವತಿಸದೇ ದೇಶದ ಆರ್ಥಿಕ ವ್ಯವಸ್ಥೆಗೆ ನಷ್ಟ ಉಂಟುಮಾಡುತ್ತಾರೆ. ಪರಿಶೀಲನೆಗೆ ಬಂದ ಸಂದರ್ಭದಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬರುತ್ತಿದೆ. ಆದ್ದರಿಂದ ಸ್ಥಳೀಯ ಉದ್ಯಮಿಗಳು ನಿಮ್ಮ ದಾಖಲೆಗಳ ಬಗ್ಗೆ ಎಚ್ಚರ ವಹಿಸಬೇಕು. ಅಪರಿಚಿತರೊಂದಿಗೆ ದಾಖಲೆಗಳನ್ನು ಹಂಚಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಸ್ಥಳೀಯ ಸಂಸ್ಥೆಗಳು ನಿವೇಶನ ಮಾಹಿತಿಗಳನ್ನು ಎಲ್ಲರಿಗೂ ದೊರಕುವಂತೆ ಮಾಡದೇ ಸುರಕ್ಷತೆಗೆ ಕ್ರಮ ವಹಿಸಬೇಕು. ಮಾಹಿತಿ ಪಡೆಯುವ ನಿವೇಶನದಾರರು ಒಟಿಪಿ ಅಥವಾ ಸುರಕ್ಷತಾ ಪಾಸ್ ವರ್ಡ್ ಬಳಸಲು ಅನುವು ಮಾಡಬೇಕು. ಇದರಿಂದ ಎಲ್ಲೋ ಕುಳಿತಿರುವ ವಂಚಕ ಬೇರೆಯವರ ದಾಖಲೆಯ ಮಾಹಿತಿ ಪಡೆಯಲು ಅಸಾಧ್ಯವಾಗುತ್ತದೆ.
ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ವ್ಯಕ್ತಿ ಜಿಎಸ್‌ಟಿಗೆ ಅರ್ಜಿ ಸಲ್ಲಿಸಿದರೂ ಸ್ಥಳ ಪರಿಶೀಲನೆ ಮಾಡಿಯೇ ಜಿಎಸ್‌ಟಿ ನೀಡಬೇಕು. ಇಲ್ಲದಿದ್ದರೆ ಎಲ್ಲೋ ಕುಳಿತಿರುವ ವಂಚಕರು ಮತ್ತೊಬ್ಬರ ಹೆಸರಲ್ಲಿ ಜಿಎಸ್‌ಟಿ ಪಡೆದು ವಂಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಿಎಸ್ ಟಿ ತೆರಿಗೆ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ನೀಡುವ ಮುನ್ನ ಪರಿಶೀಲಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮನವಿ ಮಾಡಿದ್ದಾರೆ.