ಧನಾತ್ಮಕ ಆಲೋಚನೆ ನಮ್ಮಲ್ಲಿ ಬೆಳೆಯುವಲ್ಲಿ ಹಾಗೂ ಜೀವನವು ಸಾಧನೆಯ ಮಾರ್ಗದಲ್ಲಿ ಮುನ್ನಡೆಯಲು ಜೆಸಿಐ ಸಹಕಾರಿ ಆಗುತ್ತದೆ ಎಂದು ಸರ್ಜಿ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ನಗರದ ಸಾಯಿ ಇಂಟರ್‌ನ್ಯಾಷನಲ್ ಹೋಟೆಲ್‌ನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಆಯೋಜಿಸಿದ್ದ 2023ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೆಸಿಐ ನಂತಹ ಸಂಸ್ಥೆಗಳಲ್ಲಿ ನಿರಂತರ ಭಾಗವಹಿಸುವುದರಿಂದ ಸ್ವಯಂ ವ್ಯಕ್ತಿತ್ವ ವಿಕಸನ ಸಾಧ್ಯ. ನಿರಂತರ ಪರಿಶ್ರಮದ ಮೂಲಕ ಜೀವನದಲ್ಲಿ ಸಾಧಿಸಲು ಪ್ರೇರಣೆ ದೊರೆಯುತ್ತದೆ. ಉತ್ತಮ ಸಂವಹನದ ಕೌಶಲ್ಯದ ಜತೆಯಲ್ಲಿ ನಾಯಕತ್ವ ಗುಣ ಬೆಳೆಯಲು ಕಾರಣವಾಗುತ್ತದೆ. ಮಾನವೀಯ ಸೇವೆಯ ಮೌಲ್ಯದ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿಯ ಅಧ್ಯಕ್ಷರಾಗಿ ಸತೀಶ್ ಚಂದ್ರ ಅವರು ಒಂದು ವರ್ಷದ ಅವಧಿಯಲ್ಲಿ ಉತ್ತಮವಾಗಿ ಮಾಡಿದ ಕೆಲಸಗಳು ಎಲ್ಲರಿಗೂ ಸ್ಫೂರ್ತಿ. ಮುಂದಿನ ವರ್ಷದಲ್ಲಿ ಕಾರ್ಯ ನಿರ್ವಹಿಸಲಿರುವ ಹೊಸ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜೆಸಿಐ ಸಂಸ್ಥೆಗೆ ಸೇರಿದ ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.
ಜೆಸಿಐ ಸೆನೆಟರ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಹಳ್ಳಿಯಲ್ಲಿ ಬೆಳೆದ ನನಗೆ ಜೀವನವನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಲು ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಜೆಸಿಐ ಸಂಸ್ಥೆಯಲ್ಲಿನ ನಿರಂತರ ಪಾಲ್ಗೊಳ್ಳುವಿಕೆ ಸಹಕಾರಿಯಾಯಿತು ಎಂದು ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷನಾಗಿದ್ದ ಒಂದು ವರ್ಷದ ಅವಧಿಯಲ್ಲಿ ವೈವಿಧ್ಯ, ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಥೆಯು ಎಲ್ಲರ ಗಮನ ಸೆಳೆಯಿತು. ನನ್ನೂರಿನ ಬೀರನಕೆರೆಯ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಯಿತು.
ಶಾಲೆಗಳ ದತ್ತು ಸ್ವೀಕಾರ, ತರಬೇತಿ, ಕಾನೂನು ಅರಿವು ಕಾರ್ಯಾಗಾರ, ಮಹಿಳಾ ಸಾಧಕರಿಗೆ ಗೌರವ, ಅತ್ಯಂತ ಯಶಸ್ವಿ ಸಪ್ತಾಹ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು ಎಂದು ತಿಳಿಸಿದರು.
2023ನೇ ಸಾಲಿನ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷೆ ಸುಷ್ಮಾ ಬಿ. ಹಿರೇಮಠ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯು ನಾಯಕತ್ವ ಬೆಳೆಯುವಲ್ಲಿ ಜೆಸಿಐ ಸಂಸ್ಥೆಯು ಮಹತ್ತರ ಪಾತ್ರ ವಹಿಸುತ್ತದೆ. ನಾನು ಜೆಸಿ ಸದಸ್ಯನಾದ ನಂತರ ಉತ್ತಮ ತರಬೇತಿ ದೊರೆಯಿತು. ಹೆಚ್ಚು ಹೆಚ್ಚು ಜನರ ಒಡನಾಟದ ಜತೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯ 15 ವರ್ಷಗಳಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದು, ಒಂದು ವರ್ಷದ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಸಮಾಜಮುಖಿ ಹಾಗೂ ಸೇವಾ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಜೆಎಸ್‌ಎಸ್ ಕಾಲೇಜು ಪ್ರಾಚಾರ್ಯೆ ಡಾ. ಕವಿತಾ ರಾಜ್, ಜೆಸಿಐ ವಲಯ ಅಧ್ಯಕ್ಷ ಅನುಷ್ ಗೌಡ, ವಲಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯಕ್ರಮ ನಿರ್ದೇಶಕ ಮಂಜುನಾಥರಾವ್ ಕದಂ, 2023ರ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಕಾರ್ಯದರ್ಶಿ ಡಾ. ಲಲಿತಾ ಭರತ್, 2022ರ ಕಾರ್ಯದರ್ಶಿ ಸಂತೋಷ್ ಕುಮಾರ್ ಬಿ.ಎನ್., ಕಿಶೋರ್‌ಕುಮಾರ್.ಡಿ, ಕೀರ್ತನಾ ಕಿಶೋರ್, ಡಾ. ಅಖಿಲಾ, ಗೌರಿ ಸರ್ಜಿ ಮತ್ತಿತರರು ಉಪಸ್ಥಿತರಿದ್ದರು.