ಮೂಡಿಗೆರೆ: ಮನಸ್ಸಿಗೆ ಶಾಂತಿ ನೀಡುವ ಸಂಪತ್ತನ್ನು ಪಡೆಯಲು ನಾಗರೀಕರು ಧರ್ಮದ ದಾರಿಯಲ್ಲಿ ಮುನ್ನೆಡೆದು ಸಾಗಿದ್ದಲ್ಲಿ ಮಾತ್ರ ಲಭಿಸಲಿದೆ ಎಂದು ಶ್ರೀ ರೇಣುಕಾ ಚಾರ್ಯ ಟ್ರಸ್ಟ್ ನ ಸದಸ್ಯ ಬಿ.ಬಿ.ರೇಣುಚಾರ್ಯ ಅವರು ಹೇಳಿದರು.
ಮೂಡಿಗೆರೆ ಪಟ್ಟಣದ ಅವಿನ್ ಸ್ವರಸಂಗಮ ಸ್ಟುಡಿಯೋ, ಪುಷ್ಪಗಿರಿ ಸಾಂಸ್ಕತಿಕ ಪ್ರತಿಷ್ಠಾನ (ರಿ), ಅವಿನ್ ಟಿವಿ ಸಹಯೋಗದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಶಿವಾಚಾರ್ಯ ಜಗದ್ಗುರು ಗಳ 68ನೇ ಜನ್ಮದಿನೋತ್ಸವ ಪ್ರಯುಕ್ತ ಸಂಗೀತ ಸೌರಭ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಡು ಕಂಡ ಪೂಜ್ಯ ರಂಭಾಪುರಿ ಶ್ರೀ ಗಳು ನಾಡಿನೆಲ್ಲೆಡೆ ಧರ್ಮ ಉಳಿಯುವಿಕೆಗಾಗಿ ಶಾಂತಿ, ಸಮೃದ್ಧಿ ಸರ್ವರಿಗೂ ಲಭಿಸಲು, ಸಾಹಿತ್ಯ ಸಾಂಸ್ಕತಿಕ ಸಂವರ್ಧಿಸಲಿ ಎಂಬ ಆಶಯದೊಂದಿಗೆ ದೇಶದೆಲ್ಲೆಡೆ ನಿರಂತರವಾಗಿ ಸಂಚರಿಸಿ ವೀರಶೈವ ಧರ್ಮದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಸಂಸ್ಥಾಪಕ ಡಾ.ಮೋಹನ್ ರಾಜಣ್ಣ ಮಾತನಾಡಿ ರಂಭಾಪುರಿ ಶ್ರೀ ಗಳು ರೇಣುಕಾಧಿ ಪಂಚಾಚಾರ್ಯರು, ಬಸವಾದಿ ಶಿವಶರಣರ ತತ್ವ ಆದರ್ಶಗಳನ್ನು ಎಲ್ಲೆಡೆ ಪಸರಿಸುತ್ತಾ ಧರ್ಮ ಸಾಂಸ್ಕೃತಿಕ ಆಚರಣೆ ಉಳಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಕಾರ್ಯೋನ್ನಮ್ಮಖರಾಗಿದ್ದಾರೆ ಎಂದರು.
ಅವಿನ್ ಟಿವಿ ಯ ವ್ಯವಸ್ಥಾಪಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಎಲ್ಲಾ ಜಾತಿಯವರಿಗೂ ಸಂಸ್ಕಾರ ಕೊಡುವ ಧರ್ಮ ಎಂದರೆ ಅದು ವೀರಶೈವ ಧರ್ಮ. ಅಂತಹ ಧರ್ಮದ ಮೂಲಕ ಸಂಸ್ಕಾರ ಕೊಡುವ ಕೆಲಸ ಜಗದ್ಗುರು ಮಾಡುತ್ತಿದ್ದಾರೆ. ಅವರು ಶತಾಯುಷಿಗಳಾಗಿ ಬಾಳಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ, ಸಂಗೀತ ಸೌರಭ ಕಾರ್ಯಕ್ರಮವನ್ನು ಬಕ್ಕಿ ಮಂಜುನಾಥ್ ಸುಚಿತ್ರಪ್ರಸನ್ನ, ಅಶ್ವಿನಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಹೆಚ್.ಆರ್ ಕಾಂತರಾಜ್, ಸಿದ್ದಾರ್ಥ, ವಸಂತ್ ಹಾರ್ಗೋಡ್, ಮಹಮ್ಮದ್ ಸಿದ್ದಿಕ್ ಮುಂತಾದವರು ಇದ್ದರು.