ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು ತೀವ್ರ ಶೀತ ಅಲೆಯಂತಹ ಪರಿಸ್ಥಿತಿಯನ್ನು ದಾಖಲಿಸಿದೆ. ಅಧಿಕ ಚಳಿಗೆ ಜನ ಮನೆ ಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಕೆಲ ಪ್ರದೇಶದಲ್ಲಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಟ್ಟ ಮಂಜಿನಿಂದಾಗಿ ವಿಮಾನಗಳು ತಡವಾಗುವ ಸಾಧ್ಯತೆಯ ಬಗ್ಗೆ ಮುನ್ಸೂಚನೆಯನ್ನು ನೀಡಿದೆ.
ವಿಮಾನ ನಿಲ್ದಾಣದಲ್ಲಿ ಕಡಿಮೆ ಗೋಚರತೆಯ ಅಪಾಯವನ್ನು ಎದುರಿಸಲು ವಿಮಾನ ನಿಲ್ದಾಣದಲ್ಲಿ ಹಲವಾರು ಕಾರ್ಯವಿಧಾನಗಳನ್ನು ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.
ಮಂಜಿನಿಂದಾಗಿ ಉತ್ತರ ರೈಲ್ವೆ ಪ್ರದೇಶದಲ್ಲಿ ಸುಮಾರು 32 ರೈಲುಗಳು ತಡವಾಗಿ ಸಂಚರಿಸುತ್ತಿವೆ. ಜೊತೆಗೆ ಕೆಟ್ಟ ಹವಾಮಾನ ಸಮಸ್ಯೆಗಳಿಂದ ದೆಹಲಿ ವಿಮಾನ ನಿಲ್ದಾಣದಿಂದ ಸುಮಾರು 34 ದೇಶೀಯ ನಿರ್ಗಮನ ವಿಮಾನಗಳು ವಿಳಂಬವಾಗಿವೆ.
ವಿವಿಧ ಸ್ಥಳಗಳಿಂದ ವಿಮಾನ ನಿಲ್ದಾಣದಲ್ಲಿ 12ಕ್ಕೂ ಹೆಚ್ಚು ಆಗಮನದ ವಿಮಾನಗಳು ವಿಳಂಬವಾಗಿವೆ. ಸಫ್ದರ್‌ಜಂಗ್‌ನಲ್ಲಿ 2.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಲೋಧಿ ರಸ್ತೆಯಲ್ಲಿ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ದಟ್ಟವಾದ ಮಂಜು ವಾಯುವ್ಯ ಭಾರತದ ಮೇಲೆ ಮತ್ತು ದೇಶದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಅಧಿಕ ಆವರಿಸಿದೆ. ಇದರಿಂದಾಗಿ ವಾಹನ ಮತ್ತು ರೈಲು ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ.
ಎಲ್ಲಾ ವಿಮಾನ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿವೆ. ಆದಾಗ್ಯೂ, ವಿಮಾನದ ಬಗ್ಗೆ ಇತ್ತೀಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿನಂತಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜು ಮತ್ತು ಕಡಿಮೆ ಗೋಚರತೆಯ ಪರಿಸ್ಥಿತಿಗಳಿಂದಾಗಿ ಹಲವಾರು ವಿಮಾನಗಳು ವಿಳಂಬವಾಗಿವೆ ಎಂದು ತಿಳಿದುಬಂದಿದೆ.