ಚಿಕ್ಕಮಗಳೂರು: ಗಿರಿಶ್ರೇಣಿಯಲ್ಲಿ ವಾಹನಗಳಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಬದಲು ಕಾಲ್ನಡಿಗೆಯ ಮೂಲಕ ಚಾರಣವನ್ನು ಪ್ರಯತ್ನಿಸಿದರೆ ಹೊಸತನದ ಅನುಭವ ಮತ್ತು ಪ್ರಕೃತಿ ಸೌಂದರ್ಯವನ್ನು ಸಮೀಪದಿಂದ ಆನಂದಿಸಬಹುದು ಎಂದು ಅಪರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರು ಹೇಳಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಅಡ್ವಂಚೇರ್ ಕ್ಲಬ್ ಸಹಯೋಗದೊಂದಿಗೆ ಚಿಕ್ಕಮಗಳೂರು ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಮುಳ್ಳಯ್ಯನಗಿರಿಗೆ ಚಾರಣ ಕಾರ್ಯಕ್ರಮವನ್ನು ಸರ್ಪದಾರಿಯ ಮೂಲಕ ಆರಂಭಿಸಿ ಅವರು ಮಾತನಾಡುತ್ತಿದ್ದರು.
ಗಿರಿಶ್ರೇಣಿಗಳಲ್ಲಿ ಚಾರಣಕ್ಕೆ ತೆರಳುವ ಮುನ್ನ ತಂಡಗಳನ್ನು ರಚಿಸಿಕೊಂಡು ಕಾಲ್ನಡಿಗೆಯಲ್ಲಿ ಸಂಚ ರಿಸಲು ಪ್ರಯತ್ನಿಸಬೇಕು. ಅತಿಯಾದ ವಾಹನಗಳ ದಟ್ಟಣೆಯಿಂದ ಪರಿಸರ ಮಾಲಿನ್ಯವಾಗುವು ದಲ್ಲದೇ ಇದರಿಂದ ಕೆಲವು ಸ್ಥಳಗಳಿಗೆ ತೆರಳಲಾಗುವುದಿಲ್ಲ. ಆ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿ ಚಾರಣ ವನ್ನು ಆರಂಭಿಸಿದರೆ ಆರೋಗ್ಯ ವೃದ್ದಿಯೊಂದಿಗೆ ಪರಿಸರವನ್ನು ಹತ್ತಿರದಿಂದ ಸವಿಯಲು ಸಾಧ್ಯ ಎಂದರು.
ಜಿಲ್ಲೆಯ ಮಲೆನಾಡು ಭಾಗವು ಅತ್ಯಂತ ರಮಣಿಯವಾದ ಪ್ರದೇಶ. ಇಂತಹ ಜಿಲ್ಲೆಯಲ್ಲಿ ಜನಿಸಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ನಾವೆಲ್ಲರೂ ಪುಣ್ಯವಂತರು. ನಗರದಿಂದ ಕೇವಲ 30 ಕಿ.ಮೀ. ಅಂತರದಲ್ಲಿರುವ ಪಶ್ಚಿಮಘಟ್ಟ ಪ್ರದೇಶ ಅಪರೂಪದ ಗಿಡ-ಮರಗಳೊಂದಿಗೆ ಪ್ರಕೃತಿಯನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯು ಅನೇಕ ಪ್ರಕೃತಿ ಸೌಂದರ್ಯವನ್ನು ಒಳಗೊಂಡಿದೆ. ಸುತ್ತಮುತ್ತಲು ಹಚ್ಚ ಹಸಿರಿನಿಂದ ಕೂಡಿರುವ ಪ್ರರ್ವತಶ್ರೇಣಿಗಳು ಚಾರಣ ಪ್ರಿಯರಿಗೆ ಅತ್ಯಂತ ಪ್ರಿಯವಾಗಲಿದ್ದು, ನೌಕರರು ಅಥವಾ ಪ್ರವಾಸಿ ಗರು ವಾಹನಗಳ ಮೂಲಕ ಸಂಚರಿಸುವ ಬದಲು ಚಾರಣ ಮೂಲಕ ತೆರಳಿದರೆ ಗಿರಿಶ್ರೇಣಿಯ ಸೌಂದರ್ಯದ ನಡುವೆ ವೃತ್ತಿ ಬದುಕಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹದು ಎಂದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಮಾತನಾಡಿ ಚಾರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ಗಿರಿಶ್ರೇಣಿಗಳಲ್ಲಿ ಕಾಲ್ನಡಿಗೆ ಚಾರಣವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್, ಜಿಲ್ಲಾ ಪಂಚಾಯಿತಿ ಅಧಿಕಾರಿ ಸೋಮಶೇಖರ್, ಭದ್ರಾ ವನ್ಯಜೀವಿ ವಿಭಾಗದ ಎಸಿಎಫ್ ಮೋಹನ್, ಪತ್ರಕರ್ತ ಜಿ.ಎಂ.ರಾಜಶೇಖರ್, ಅರಣ್ಯ ಇಲಾಖೆಯ ನವೀನ್, ಪ್ರವಾಸೋದ್ಯಮ ಅಧಿಕಾರಿ ನಾಗರಾಜ್ ಸೇರಿದಂತೆ ಅನೇಕ ಮಂದಿ ಸರ್ಕಾರಿ ನೌಕರರು ಚಾರಣದಲ್ಲಿ ಪಾಲ್ಗೊಂಡಿದ್ದರು.