ಕಳಸ: ಮನುಕುಲದ ಒಳಿತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಜನತೆಗಾಗಿ ಮುಡಿಪಾಗಿಟ್ಟವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಎಂದು ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥಾಪಕ ಡಾ. ಮೋಹನ್ ರಾಜಣ್ಣ ಅವರು ಹೇಳಿದರು.
ಕಳಸ ಪಟ್ಟಣದ ಪ್ರಬೋಧಿನಿ ವಿದ್ಯಾ ಕೇಂದ್ರ ಆವರಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಅಶ್ರಯದಲ್ಲಿ ಬುಧವಾರ ಸಂಜೆ ಶಿವೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಪುಷ್ಪನಮನ ಸಲ್ಲಿಸಿ ಬಳಿಕ ನುಡಿನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಿಸ್ವಾರ್ಥ ಸೇವೆ ಮತ್ತು ಅಪಾರ ಜ್ಞಾನವು ನಮಗೆಲ್ಲರಿಗೂ ಮಾದರಿಯಾಗಬೇಕಿದೆ. ಅತ್ಯಂತ ಸರಳ ಜೀವನವನ್ನು ಅನುಸರಿಸಿದ ಸ್ವಾಮೀಜಿಯವರು ಅದ್ಬುತ ಜ್ಞಾನವನ್ನು ಹೊಂದಿದ್ದರು. ಅವರ ಬದುಕು ಜನಸಾಮಾನ್ಯರಿಗೆ ಸ್ಪೂರ್ತಿದಾಯಕವಾದದು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷೆ ಡಾ. ರಮ್ಯಾ ಮಾತನಾಡಿ ಕಠಿಣವಾದ ವಿಷಯಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ರೀತಿಯಲ್ಲಿ ಹೇಳುವ ಕೌಶಲ್ಯತೆಯನ್ನು ಸ್ವಾಮೀಜಿಯವರ ಮಧುರವಾದ ಮಾತಿನಲ್ಲಿತ್ತು ಎಂದ ಅವರು ಅಧ್ಯಾತ್ಮದ ಜೊತೆಗೆ ವಿಜ್ಞಾನ, ಕೃಷಿ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದರು ಎಂದರು.
ಬಸವ ಸಮಿತಿ ಗೌರಾವಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಸಮಾಜಕ್ಕೆ ಸ್ಫೂರ್ತಿಯಾಗುವಂತೆ ಜೀವನದ ಪ್ರತಿಕ್ಷಣವನ್ನು ಅನುಭವಿಸಿದ ಸ್ವಾಮೀಜಿಯವರು ನಮ್ಮೊಂದಿಗೆ ಇನ್ನೂ ಹಲವು ವರ್ಷಗಳು ಜೊತೆಗಿರುವ ಮೂಲಕ ಮಾರ್ಗದರ್ಶನ ನೀಡಬೇಕಿತ್ತು ಎಂದರು.
ಈ ವೇಳೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ ಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಕುಕ್ಕೊಡು ಗಣೇಶ್, ಬಸವ ಸಮಿತಿ ಅಧ್ಯಕ್ಷ ಆನಂದಗುರೂಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ )ತಾಲ್ಲೂಕು ಸದಸ್ಯ ರಾಜು, ಸವಿತಾ ಸಮಾಜದ ಅಧ್ಯಕ್ಷ ಮೋಹನ್, ಕಸಾಪ ಅಧ್ಯಕ್ಷ ಶೇಖರ್ ಶೆಟ್ಟಿ, ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಉಪಾಧ್ಯಕ್ಷ ಆನಂದ್ ಶೆಟ್ಟಿ, ಮುಖಂಡರುಗಳಾದ ರಾಮಚಂದ್ರಹೆಬ್ಬಾರ್, ಮಹೇಂದ್ರ, ಸೋಮಯ್ಯ, ಕಿಶೋರ್, ಜ್ಯೋತಿ ಜೈನ್, ಆನಂದ್, ರಾಮು, ಚನ್ನಾಮಲ್ಲಿಕಾಜುನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.